ಸುದ್ದಿ

ಕಾಂಗ್ರೇಸ್ ಅಭ್ಯರ್ಥಿ ಶ್ರೀನಿವಾಸ್ ಹೆಸರಲ್ಲೇ ಯಾವ ಆಸ್ತಿಯೂ ಇಲ್ಲವಂತೆ

Share It

ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಟಿ.ಶ್ರೀನಿವಾಸ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ

ನಾಮಪತ್ರದಲ್ಲಿ ತಾವು ಯಾವುದೇ ಆಸ್ತಿ ಹೊಂದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.
ತಮ್ಮ ಬಳಿ ಯಾವುದೇ ಸ್ಥಿರಾಸ್ತಿ, ಚರಾಸ್ತಿ ಇಲ್ಲ. ಯಾವುದೇ ವಾಹನ, ಚಿನ್ನಾಭರಣ, ಬ್ಯಾಂಕ್ ಠೇವಣಿಯನ್ನೂ ಹೊಂದಿಲ್ಲ. ಹಾಗೆಯೇ ಸಾಲವೂ ಇಲ್ಲ ಎಂದು ವಿವರ ಸಲ್ಲಿಸಿದ್ದಾರೆ. ಆದರೆ, ಡಿ.ಟಿ.ಶ್ರೀನಿವಾಸ್ ಪತ್ನಿ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಒಟ್ಟು 80.91 ಕೋಟಿ ರೂ.‌ ಆಸ್ತಿ ಹೊಂದಿದ್ದಾರೆ.‌

ಕುಟುಂಬದ ಹೆಸರಲ್ಲಿ ಸುಮಾರು 35.44 ಕೋಟಿ ರೂ. ಆಸ್ತಿ ಇದೆ. ಮಕ್ಕಳ ಬಳಿ ಸುಮಾರು 24.13 ಕೋಟಿ ರೂ.‌ ಆಸ್ತಿ ಇರುವುದಾಗಿ ಅಫಿಡವಿಟ್​​ನಲ್ಲಿ ಮಾಹಿತಿ ನೀಡಿದ್ದಾರೆ. ಡಿ.ಟಿ.ಶ್ರೀನಿವಾಸ್ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಶಿಕ್ಷಣ ತಜ್ಞರಾಗಿರುವ ಅವರು MBA, MA, BE (civil) ವಿದ್ಯಾರ್ಹತೆ ಹೊಂದಿರುವುದಾಗಿ ತಿಳಿಸಿದ್ದಾರೆ.

ರಾಮೋಜಿ ಗೌಡ ಆಸ್ತಿ ವಿವರ: ಬೆಂಗಳೂರು ಪದವೀಧರರ ಕ್ಷೇತ್ರದಿಂದ ರಾಮೋಜಿ ಗೌಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರು ಒಟ್ಟು 45.41 ಕೋಟಿ ರೂ. ಆಸ್ತಿಯ ಒಡೆಯ.ಇವರಿಗೆ 9.19 ಕೋಟಿ ರೂ.‌ ಮೌಲ್ಯದ ಚರಾಸ್ತಿ ಇದ್ದರೆ, 36.22 ಕೋಟಿ ರೂ. ಸ್ಥಿರಾಸ್ತಿ ಇದೆ. ಪತ್ನಿ ಹೆಸರಲ್ಲಿ 12.45 ಕೋಟಿ ರೂ. ಸ್ಥಿರಾಸ್ತಿ ಇದ್ದರೆ, 1.03 ಕೋಟಿ ರೂ. ಚರಾಸ್ತಿಯಿದೆ. ರಾಮೋಜಿಗೌಡ ಸುಮಾರು 14.31 ಕೋಟಿ ರೂ. ಒಟ್ಟು ಸಾಲ ಹೊಂದಿದ್ದಾರೆ.

ಉತ್ತರ ಪ್ರದೇಶದಲ್ಲಿ MA ವಿದ್ಯಾಭ್ಯಾಸ ಪೂರೈಸಿ ಸರ್ಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾಗಿರುವ ರಾಮೋಜಿ ಗೌಡ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಇದೀಗ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿರುವುದಾಗಿ ಅಫಿಡವಿಟ್​​ನಲ್ಲಿ ತಿಳಿಸಿದ್ದಾರೆ.

ಈಶಾನ್ಯ ಪದವೀಧರ, ನೈಋತ್ಯ ಪದವೀಧರ ಮತ್ತು ಬೆಂಗಳೂರು ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೂನ್​ 3ರಂದು ಚುನಾವಣೆ ನಡೆಯಲಿದೆ.
ಮೇ 10ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮೇ 16. ಜೂನ್ 3ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಈ 6 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 6ರಂದು ಫಲಿತಾಂಶ ಹೊರಬೀಳಲಿದೆ.


Share It

You cannot copy content of this page