ತಂತ್ರಜ್ಞಾನ ಅಭಿವೃದ್ಧಿ ಹಿನ್ನೆಲೆ ವರ್ಷದಿಂದ ವರ್ಷಕ್ಕೆ ಶಿಕ್ಷಣ ಕ್ಷೇತ್ರದಲ್ಲಿಯೂ ಭಾರಿ ಸುಧಾರಣೆಗಳು ಕಂಡುಬರುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ 111 ವರ್ಷಗಳ ಇತಿಹಾಸ ಹೊಂದಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನರೇಟಿವ್ ಎಐ ಶಿಕ್ಷಕ ರೋಬೋಟ್ ಪರಿಚಯಿಸಲಾಗಿದೆ. ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ರೋಬೋಟ್ ಶಿಕ್ಷಕರಂತಹ ವಿನೂತನ ಪ್ರಯೋಗ ಇದೇ ಮೊದಲಾಗಿದೆ. ಇನ್ನು ವಂಡ್ಸೆ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಸೀರೆ ಧರಿಸಿರುವ ಮಾನವರೂಪದ ಈ ರೋಬಟ್ನ ಸಂವಾದಾತ್ಮಕ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಪರಿಚಯಿಸಿದ್ದೇವೆ. ಇದು ಶಿಕ್ಷಕರಿಗೆ ಪರ್ಯಾಯವಲ್ಲ, ಶಿಕ್ಷಕರಿಗೆ ಸಹಾಯಕವಾಗುವ ಸಾಧನ. 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂವಾದಾತ್ಮಕ ಕಲಿಕೆಗೆ ಇದು ಸಹಕಾರ ನೀಡುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಸಂಪೂರ್ಣವಾಗಿ ಬಳಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

