ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತೆ ಮಹಿಳೆ ಅಪಹರಣ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದು ನಿನ್ನೆ ಮಧ್ಯಾಹ್ನ ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಎಚ್.ಡಿ.ರೇವಣ್ಣ ಬಿಡುಗಡೆಯಾಗಿದ್ದರು.
ಬಿಡುಗಡೆಯ ಹಕ್ಕಿಯಾಗಿದ್ದ ರೇವಣ್ಣ ಬೆಂಗಳೂರಿನ ಅನೇಕ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಆದರೆ ಇಂದು ಹೊಳೆನರಸೀಪುರ ಮನೆಯಲ್ಲಿ ತನ್ನ ಸಂಬಂಧಿಕಳೂ ಆಗಿದ್ದ 47 ವರ್ಷದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಜಾಮೀನು ಕೋರಿ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿ ವಿಚಾರಣೆ ನಡೆದು ಕೆಲವು ಕ್ಷಣಗಳವರೆಗೆ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಕೋರ್ಟ್ ಹಾಲ್ ನಿಂದ ನಿರ್ಗಮಿಸಿದ್ದ ನ್ಯಾಯಾಧೀಶರು ಬಳಿಕ ಬಂದು ಆರೋಪಿ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದರು. 5 ಲಕ್ಷ ರೂಪಾಯಿ ಬಾಂಡ್ ಮತ್ತು ಜಾಮೀನಿಗೆ ಇಬ್ಬರ ಶ್ಯೂರಿಟಿ ನೀಡಬೇಕು ಎಂದು ಆದೇಶ ನೀಡಿ ನ್ಯಾಯಾಧೀಶರು ನಾಳೆ ಮಧ್ಯಾಹ್ನ 3 ಗಂಟೆಗೆ ವಿಚಾರಣೆಯನ್ನು ಮುಂದೂಡಿದರು.
ಅದರಂತೆ ಎಚ್.ಡಿ.ರೇವಣ್ಣ ಅವರು ನ್ಯಾಯಾಧೀಶರಿಗೆ 5 ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಿದರು.