ಅಪರಾಧ ಸುದ್ದಿ

ವಕೀಲೆ ಚೈತ್ರಾ ಗೌಡ ಆತ್ಮಹತ್ಯೆ‌ ಇನ್ನೂ ಸಸ್ಪೆನ್ಸ್!

Share It

ಬೆಂಗಳೂರು : ಕೆಎಎಸ್ ಅಧಿಕಾರಿಯೊಬ್ಬರ ಪತ್ನಿಯಾಗಿದ್ದ ಹೈಕೋರ್ಟ್ ವಕೀಲೆ ಚೈತ್ರಾಗೌಡ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಪೊಲೀಸರಿಗೆ ಸಿಕ್ಕಿರುವ ಡೆತ್‍ನೋಟ್ ನಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ, ಬದುಕಲು ಸಾಧ್ಯವಾಗುತ್ತಿಲ್ಲ, ನನ್ನ ಪತಿ ಶಿವಕುಮಾರ್ ಒಳ್ಳೆಯವರು, ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮಾರ್ಚ್ ತಿಂಗಳಲ್ಲೇ ಚೈತ್ರಾಗೌಡ ಡೆತ್‍ನೋಟ್ ಬರೆದಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಯಾವ ಕಾರಣಕ್ಕೆ ಅವರಿಗೆ ಮಾನಸಿಕ ಖಿನ್ನತೆಯಾಗಿತ್ತು. ಖಿನ್ನತೆಗೆ ಕಾರಣ ಗಳೇನು?ಎಂಬ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ನಿನ್ನೆ ಸಂಜಯ್ ನಗರದ ಗೆದ್ದಲಹಳ್ಳಿಯ ಅಪಾರ್ಟ್‍ಮೆಂಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಚೈತ್ರಾಗೌಡ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಪೊಲೀಸರು ಅವರ ಪತಿ, ಕುಟುಂಬದವರು ಮತ್ತು ಸ್ನೇಹಿತರನ್ನು ಭೇಟಿ ಮಾಡಿ ಚೈತ್ರಾ ಅವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಡೆತ್‍ನೋಟ್ ಬಗ್ಗೆ ಕೂಡ ಪರಿಶೀಲನೆ ನಡೆಸುತ್ತಿದ್ದಾರೆ. ಚೈತ್ರಾಗೌಡ ಅವರು ತುಂಬಾ ಗಟ್ಟಿಗಿತ್ತಿ, ಆತ್ಮಹತ್ಯೆ ಮಾಡಿಕೊಳ್ಳುವಂತ ಮನಸ್ಥಿತಿ ಅವರಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಬೆಂಗಳೂರು ವಕೀಲರ ಸಂಘ ಪೊಲೀಸರಿಗೆ ದೂರು ನೀಡಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಈವರೆಗೆ ವಕೀಲೆ ಚೈತ್ರಾ ಆತ್ಮಹತ್ಯೆ ಪ್ರಕರಣ ಇನ್ನೂ ನಿಗೂಢವಾಗಿಯೇ ಇದೆ.


Share It

You cannot copy content of this page