ತುಮಕೂರು : ಜನಸಾಮಾನ್ಯರು ಸ್ಥಳೀಯ ಮಟ್ಟದಲ್ಲಿ ಬಗೆಹರಿಯದ ತಮ್ಮ ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಲು ಹಾಗೂ ಶೀಘ್ರಗತಿಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಪ್ರತೀ ತಿಂಗಳು ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದ್ದು, ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದರು.
ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಡಳಿತದಿಂದ ಜನರಿದ್ದೆಡೆಯೇ ಸೇವೆ ಒದಗಿಸುವ ಸರ್ಕಾರದ ಮಹದಾಸೆಯಂತೆ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆ/ರಾಜ್ಯ ಮಟ್ಟದ ಸಮಸ್ಯೆಗಳಿದ್ದರೆ ಕಾಲಮಿತಿಯೊಳಗೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಜಿಲ್ಲಾಡಳಿತವು ಪ್ರತೀ ಹಳ್ಳಿ-ಹಳ್ಳಿಗೆ ಹೋಗಿ ಜನರ ಕಷ್ಟ-ಸುಖಗಳನ್ನು ಆಲಿಸಿ ಸ್ಪಂದಿಸುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಸರ್ಕಾರದ ನಿರ್ದೇಶನದನ್ವಯ ಜನಸ್ಪಂದನ ಕಾರ್ಯಕ್ರಮದಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು ಸ್ಥಳದಲ್ಲಿಯೇ ಹಾಜರಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ಜನ ಸಾಮಾನ್ಯರು ಈ ಸದವಕಾಶವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ೧೦೭ ಕೋಟಿ ರೂ.ಗಳ ಬರಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗಿದ್ದು, ತಾಂತ್ರಿಕ ಕಾರಣಗಳಿಂದ ಇನ್ನು ೩೦,೦೦೦ ರೈತರಿಗೆ ಜಮೆ ಮಾಡಬೇಕಾಗಿದೆ. ಈವರೆಗೂ ಬರ ಪರಿಹಾರ ಜಮೆಯಾಗದ ರೈತರ ಖಾತೆಗೆ ಆಧಾರ್ ಸಂಖ್ಯೆಯನ್ನು ಜೂನ್ ೩೦ರೊಳಗಾಗಿ ಜೋಡಣೆ ಮಾಡಿಸಲು ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಸುವ ಮೂಲಕ ಬರಪರಿಹಾರವನ್ನು ಪಡೆಯಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಆದೇಶಗಳನ್ನು ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯಡಿ ಅಂತರ್ಜಾತಿ ವಿವಾಹವಾದ ನರಸಿಂಹಮೂರ್ತಿ ಹಾಗೂ ಪೂಜಾ ದಂಪತಿಗಳಿಗೆ ೧.೨೫ ಲಕ್ಷ ರೂ.ಗಳ ಎನ್‌ಎಸ್‌ಸಿ ಬಾಂಡ್ ವಿತರಿಸಲಾಯಿತಲ್ಲದೆ, ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ, ಕಂದಾಯ ಇಲಾಖೆಯಿಂದ ವೃದ್ಧಾಪ್ಯವೇತನ, ವಿಧವಾ ವೇತನ, ಪವತಿ ಖಾತೆ ಪಹಣಿ, ವಸತಿ ಸೌಲಭ್ಯಗಳ ಕಾರ್ಯಾದೇಶಗಳನ್ನು ಹಾಗೂ ಕಾಡು ಪ್ರಾಣಿಗಳಿಂದ ದಾಳಿಗೊಳಗಾದವರಿಗೆ ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ಜನಸಾಮಾನ್ಯರು ಸುರಕ್ಷಿತವಾಗಿ ಶಾಂತಿ ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸಲು ಪೊಲೀಸ್ ಇಲಾಖೆ ಸದಾ ಸಿದ್ಧವಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಪೊಲೀಸ್ ಇಲಾಖೆಯಿಂದ ಜನಸ್ನೇಹಿ ಸೇವೆ ನೀಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಜನಪ್ರತಿನಿಧಿಗಳು, ತಹಶೀಲ್ದಾರ್ ಕೆ. ಮಂಜುನಾಥ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಸಿ. ಅನಂತರಾಮು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಗೂ ಸಹಾಯಕ ನಿರ್ದೇಶಕಿ ಯಮುನಾ ಸೇರಿದಂತೆ ಬೆಸ್ಕಾಂ, ಆರೋಗ್ಯ, ಶಿಕ್ಷಣ, ಪಟ್ಟಣ ಪಂಚಾಯತಿ, ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

