ರೈತರ ಬೆಳೆಗೆ ಉತ್ತಮ ಮೌಲ್ಯ ಕೊಡಿಸಲು ದಿ. ಕೆ ಎಚ್ ಪಾಟೀಲ್ ಶ್ರಮಿಸಿದ್ದರು: ಬಸವರಾಜ ಬೊಮ್ಮಾಯಿ
ಗದಗ: ಹಿರಿಯ ದಿವಂಗತ ಕೆ. ಎಚ್. ಪಾಟೀಲ, ರೈತರ ಪರ, ಅವರ ಬೆಳೆಗೆ ಉತ್ತಮ ಮೌಲ್ಯ ಕೊಡಿಸುವಲ್ಲಿ ಹಲವಾರು ಕಾರ್ಯ ಮಾಡಿದ್ದರು ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾ ಪಂಚಾಯತ, ತೋಟಗಾರಿಕೆ ಇಲಾಖೆ, ಹುಲಕೋಟಿ ಗ್ರಾಮ ಪಂಚಾಯತಿ, ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಗೊಡಂಬಿ ಬೆಳೆಗಾರರ ಸಂಘ, ಹುಲಕೋಟಿ ರೈತ ಉತ್ಪಾದಕರ ಕಂಪನಿ ಇವುಗಳ ಆಶ್ರಯದಲ್ಲಿ ಹುಲಕೋಟಿಯಲ್ಲಿ ನಿರ್ಮಿಸಲಾದ ಗೊಡಂಬಿ ಸಂಸ್ಕರಣೆ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹುಲಕೋಟಿಯಲ್ಲಿ ಗೋಡಂಬಿ ಘಟಕ ನಿರ್ಮಾಣಕ್ಕೆ ಕಾರಣೀಕರ್ತರಾದ ಎಲ್ಲರಿಗೂ ಧನ್ಯವಾದಗಳು. ಆಹಾರದಲ್ಲಿ ಸ್ವಾವಲಂಬಿಯಾದ ರಾಷ್ಟ ಸ್ವಾವಲಂಬಿ ಹಾಗೂ ಸ್ವಾಭಿಮಾನಿ ರಾಷ್ಟ್ರ ಆಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯನಿರವಾಗಬೇಕು ಎಂದರು.
ರೈತ ಗಟ್ಟಿಯಾದರೇ ದೇಶ ಗಟ್ಟಿಗೊಳ್ಳುವದು. ಆರ್ಥಿಕ ಸಬಲತೆಗೆಯೆಡೆಗೆ ರೈತರು ಸಾಗಬೇಕು. ರಾಷ್ಟ್ರದ ಆರ್ಥಿಕ ಅಭಿವೃದ್ಧಿ ಕೃಷಿಯಿಂದ ಸಾಧ್ಯ. ಆದುದರಿಂದ ರೈತರ ಕೃಷಿ ಪರವಾದ ಯೋಜನೆಗಳು ಹೆಚ್ಚು ಹೆಚ್ಚು ಅನುಷ್ಠಾನ ಮಾಡುವ ಮೂಲಕ ಆರ್ಥಿಕಾಭಿವೃದ್ಧಿ ಆಗಲಿ ಎಂದು ಶುಭ ಕೋರಿದರು.
ಈ ಭಾಗದ ರೈತರು ಬಯಲು ಸೀಮೆಯಲ್ಲೂ ಗೊಡಂಬಿ ಬೆಳೆ ಬೆಳೆದು ಸಾಧನೆ ಮಾಡಿದ್ದಾರೆ ಸುಮಾರು 1600 ಎಕರೆ ಪ್ರದೇಶದಲ್ಲಿ ಗೊಡಂಬಿ ಬೆಳೆದು ಬಯಲು ಸೀಮೆಯಲ್ಲೂ ಗೊಡಂಬಿ ಕೃಷಿ ಸಾಧ್ಯ ಎಂಬುದನ್ನು ಸಾಭೀತು ಪಡಿಸಿದ್ದಾರೆ. ಶ್ಯಾಮ ಪ್ರಸಾದ ಮೂಖರ್ಜಿ ರುರ್ಬನ್ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದರ ಉದ್ದೇಶ ಈ ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯದಿಂದ ಇಲ್ಲಿ ಸಪಲವಾಗಿದೆ ಎಂದು ಹೇಳಿದರು.
ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಮಾತನಾಡಿ, ಸಹಕಾರ ಭೀಷ್ಮ ಕೆ. ಎಚ್. ಪಾಟೀಲ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ ಈ ಗೋಡಂಬಿ ಸಂಸ್ಕರಣೆ ಘಟಕ ಒಂದಾಗಿದೆ ಎಂದು ಅವರು ಹೇಳಿದರು.
ಗದಗ ತಾಲ್ಲೂಕಿನ ಗೋಡಂಬಿ ರುಚಿಯಲ್ಲಿ ತುಂಬಾ ಶ್ರೇಷ್ಠವಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಗೊಡಂಬಿಗೆ ಮಾರುಕಟ್ಟೆ ಒದಗಿಸುವದು ಬಹುದೊಡ್ಡ ಸವಾಲಾಗಿದೆ. ಇದಕ್ಕೆ ಈ ಸಂಸ್ಕರಣಾ ಘಟಕ ಸಹಕಾರಿ ಆಗಲಿ ಎಂದರು.
ಗ್ರಾಮಗಳ ಅವಶ್ಯಕತೆ ಪೂರೈಸುವಲ್ಲಿ ರುರ್ಬನ್ ಯೋಜನೆ ಬಳಕೆ ಮಾಡಿಕೊಳ್ಳಲಾಗಿದೆ. ಇಂತಹ ಅನೇಕ ರೈತರಿಗೆ ಬಲ ತುಂಬಲು ಬಳಕೆ ಆಗುತ್ತಿರುವುದು ಸಂತಸ ತಂದಿದೆ. ಈ ಸುತ್ತಲಿನ ಭಾಗದ ರೈತರಿಗೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಆಗಲಿ ಎಂದು ಹೇಳಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನಾ, ಉಪಾಧ್ಯಕ್ಷ ಎ ವಿ ತಹಶಿಲ್ದಾರ ಹಾಜರಿದ್ದರು.

