ಸುದ್ದಿ

ನೀತಿಯೇ ಇಲ್ಲದಿರುವಾಗ, ನೀತಿ ಆಯೋಗದ ಸಭೆಗೆ ಹೋಗಬೇಕೆ: ಡಿಸಿಎಂ ಡಿ.ಕೆ. ಶಿವಕುಮಾರ್

Share It

ಬೆಂಗಳೂರು: ಕೇಂದ್ರ ಸರ್ಕಾರದ ಬಳಿ ನೀತಿಯೇ ಇಲ್ಲದಿರುವಾಗ, ನೀತಿ ಆಯೋಗದ ಸಭೆಗೆ ಹೋಗಿ ಏನು ಪ್ರಯೋಜನ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೇಂದ್ರದ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವ ಬಗ್ಗೆ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬುಧವಾರ ಉತ್ತರಿಸಿದ ಶಿವಕುಮಾರ್ ಅವರು, “ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ. ಇಲ್ಲಿ ನೀತಿಯೇ ಇಲ್ಲ. ರಾಜ್ಯಕ್ಕೆ ಯಾವುದೇ ಯೋಜನೆ ಸಿಕ್ಕಿಲ್ಲ. ರಾಜ್ಯಕ್ಕೆ ಬಜೆಟ್ ನಲ್ಲಿ ಸರಿಯಾದ ಪ್ರಾತಿನಿದ್ಯ ಸಿಕ್ಕಿಲ್ಲದ ಕಾರಣ, ಪಕ್ಷದ ನಾಯಕರು ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದಾರೆ” ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಬಗ್ಗೆ ಕೇಳಿದಾಗ, “ಈ ವಿಚಾರದಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ. ನಾನು ಯಾವುದನ್ನೂ ಆತುರದಲ್ಲಿ ಮಾಡುವುದಿಲ್ಲ. ನಾನು ವಿಧೇಯಕ ಮಂಡನೆ ಮಾಡಿದ್ದೇನೆ. ಅವರು ಅದನ್ನು ಸಂಪೂರ್ಣವಾಗಿ ಪರಾಮರ್ಶಿಸಿ ಚರ್ಚೆ ಮಾಡಲಿ. ಬೆಂಗಳೂರು ಅನಿಯಂತ್ರಿತವಾಗಿ ಬೆಳೆಯುತ್ತಿದ್ದು, 1.40 ಕೋಟಿ ಜನಸಂಖ್ಯೆ ಇದೆ. ಉತ್ತಮ ಆಡಳಿತದ ಅಗತ್ಯವಿದೆ. ಇಲ್ಲಿ 7 ಸಿಎಂಸಿಗಳಿವೆ. ಮೂಲಸೌಕರ್ಯ ಹಾಗೂ ಆರ್ಥಿಕ ವ್ಯವಸ್ಥೆ ನೋಡಿಕೊಂಡು ತೀರ್ಮಾನ ಮಾಡಬೇಕು. ಈ ಬಗ್ಗೆ ವಿರೋಧ ಪಕ್ಷಗಳು ಚರ್ಚೆ ಮಾಡಲಿ. ಅದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ” ಎಂದು ತಿಳಿಸಿದರು.


Share It

You cannot copy content of this page