ಅಪರಾಧ ರಾಜಕೀಯ ಸುದ್ದಿ

ಬಿ.ಸಿ.ಪಾಟೀಲ್ ಅಳಿಯನ ಆತ್ಮಹತ್ಯೆ: ಶಿವಮೊಗ್ಗ ಎಸ್ಪಿ ಹೇಳಿದ್ದೇನು?

Share It

ಶಿವಮೊಗ್ಗ/ದಾವಣಗೆರೆ : ಮಾಜಿ ಸಚಿವ ಬಿ.ಸಿ ಪಾಟೀಲ್ ಅವರ ಅಳಿಯ ಪ್ರತಾಪ್ ಕುಮಾರ್ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರೋ ಪ್ರತಾಪ್ ಕುಮಾರ್ ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯ ಪಾಟೀಲ್ ಪತಿಯಾಗಿದ್ದಾರೆ. ಹೊನ್ನಾಳಿ ತಾಲೂಕಿನ ಅರಕೆರೆ ಸಮೀಪದ ಫಾರೆಸ್ಟ್​ನಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ವಿಷ ಸೇವಿಸಿ ಪ್ರತಾಪ್​ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಕ್ಷಣ ಪ್ರತಾಪ್​ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತಾಪ್​ ಮೃತಪಟ್ಟಿದ್ದಾರೆ. ಇನ್ನು ಅಳಿಯನ ಆತ್ಮಹತ್ಯೆ ಬಗ್ಗೆ ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದು, ಮಗಳ ಜೊತೆ 2008ರಲ್ಲಿ ಮದುವೆ ಆಗಿತ್ತು. ಮಕ್ಕಳಾಗಿಲ್ಲ ಎನ್ನುವ ವಿಚಾರದಲ್ಲಿ ಕೊರಗಿತ್ತು. ಡಿ ಅಡಿಕ್ಷನ್ ಸೆಂಟರ್‌ನಲ್ಲಿ ಎರಡು ತಿಂಗಳು ಇದ್ದರು. ಆಗ ಸರಿ ಹೋಗಿದ್ದರು ಎಂದರು.

ಇವತ್ತು ಬೆಳಗ್ಗೆ ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ. ಆದ್ರೆ, ಸಾಯುತ್ತಿದ್ದೇನೆ ಎಂದು ಕುಟುಂಬಸ್ಥರಿಗೆ ಕಾಲ್ ಮಾಡಿ ಹೇಳಿದ್ದ. ಈ ವಿಚಾರವನ್ನು ಪ್ರತಾಪ್‌ ಅವರ ಅಣ್ಣ ಕಾಲ್ ಮಾಡಿ ಮಾಹಿತಿ ನೀಡಿದ್ದ. ಮದುವೆ ಆಗಿ 16 ವರ್ಷ ಆಗಿತ್ತು. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರೆ ನೋಡಿಕೊಳ್ಳುತ್ತಿದ್ದರು.

ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ನಾನು ನಮ್ಮ ಭಾಗದ ಕೆರೆಗಳಿಗೆ ಹೋಗಿ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯ್ತು. ನಾಳೆ (ಜುಲೈ 09) ಚನ್ನಗಿರಿಯ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ತಿಳಿಸಿದರು.

ಪ್ರತಾಪ್ ಆತ್ಮಹತ್ಯೆ ಬಗ್ಗೆ ದಾವಣಗೆರೆ ಎಸ್ಪಿ ಹೇಳಿದ್ದೇನು?
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್, ಆತ್ಮಹತ್ಯೆ ಮಾಡಿಕೊಂಡ ಪ್ರತಾಪ್ ಕುಮಾರ್ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದ ನಿವಾಸಿ. ವೈಯಕ್ತಿಕ ಕಾರಣಕ್ಕೆ ವಿಷ ಸೇವಿಸಿದ್ದಾರೆ. ಅವರು ಶಿವಮೊಗ್ಗ ಕಡೆಯಿಂದ ಕಾರಿನಲ್ಲಿ ಒಬ್ಬರೇ ಬಂದು ಕ್ರಿಮಿನಾಶಕ ಔಷಧಿ ‌ಕುಡಿದಿದ್ದಾರೆ. ಮದ್ಯ ಸೇವಿಸಿ ಕಾರ್ ನಲ್ಲಿ ಅಸ್ವಸ್ಥರಾಗಿದ್ದರು. ಮೃತರ ಸಹೋದರ ಪ್ರಭು ಎಂಬುವರು ‌ಪೊಲೀಸರಿಗೆ ಮಾಹಿತಿ‌ ನೀಡಿದ್ದರು.‌

ನಂತರ ಪೊಲೀಸರು ಸ್ಥಳಕ್ಕೆ ಹೋಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹೊನ್ನಾಳಿ ನಂತರ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿ ಅಗದೇ ಸಾವನ್ನಪ್ಪಿದ್ದಾರೆ. ಇವರು ಕೃಷಿ ಹಾಗೂ ಇತರೆ ವ್ಯವಹಾರ ಮಾಡಿಕೊಂಡಿದ್ದರು. ಮೇಲ್ನೋಟಕ್ಕೆ ಇದೊಂದು ವೈಯಕ್ತಿಕ ಕಾರಣದಿಂದ ನಡೆದ ಘಟನೆ.

ಯಾವುದೇ ರೀತಿಯ ಡೆತ್ ನೋಟ್ ಪತ್ತೆಯಾಗಿಲ್ಲ. ಸದ್ಯ ಮೊಬೈಲ್ ವಶಕ್ಕೆ ಪಡೆಯಲಾಗಿದ್ದು. ‌ಪರಿಶೀಲನೆ ಮಾಡಲಾಗುವುದು. ಇನ್ನು ಇನ್ನೂ ದೂರು ಕೊಟ್ಟಿಲ್ಲ. ದೂರು ನೀಡಿದ ಬಳಿಕ ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಅಸಲಿಗೆ ಪ್ರತಾಪ್ ಶವ ಪತ್ತೆಯಾಗಿದ್ದೇಗೆ?
ಪ್ರತಾಪ್‌ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ವಿಚಾರವನ್ನು ಮೃತನ ಸಹೋದರ ಪೊಲೀಸರಿಗೆ ತಿಳಿಸಿ ಬಳಿಕ ಬಿ.ಸಿ ಪಾಟೀಲ್​ ಅವರಿಗೂ ವಿಚಾರ ಮುಟ್ಟಿಸಿದ್ದಾರೆ. ಬಳಿಕ ಬಿ.ಸಿ ಪಾಟೀಲ್ ಅಳಿಯನ ಮೊಬೈಲ್ ನಂಬರ್ ಹಾಗೂ ಕಾರು ನಂಬರ್ ಕೊಟ್ಟಿದ್ದಾರೆ. ನಮ್ಮ ಅಳಿಯ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಾರೆ. ಕೂಡಲೇ ಅಳಿಯನನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿಕೊಂಡಿದ್ದಾರೆ.

ಕೂಡಲೇ ಶಿವಮೊಗ್ಗ ಪೊಲೀಸರು ಕಾರ್ ನಂಬರ್ ಹಾಗೂ ಮೊಬೈಲ್ ನಂಬರ್ ಟ್ರೇಸ್ ಮಾಡಿ ಪತ್ತೆ ಹಚ್ಚಿದ್ದಾರೆ. ಮಧ್ಯಾಹ್ನ 3 ಘಂಟೆ ಸುಮಾರಿಗೆ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ಕಾರು ಪತ್ತೆಯಾಗಿದೆ. ಆ ಸಮಯದಲ್ಲಿ ಪ್ರತಾಪ್ ಕುಮಾರ್​ ಕಾರಿನಲ್ಲಿ ವಿಷ ಸೇವಿಸಿ ನರಳಾಡುತ್ತಿದ್ದರಂತೆ.

ಕೂಡಲೇ ಪೊಲೀಸರು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಪ್ರತಾಪ್ ಅವರನ್ನು ದಾಖಲಿಸಿದ್ದಾರೆ. ಅವರ ಸ್ಥಿತಿ ಕ್ರಿಟಿಕಲ್ ಕಂಡಿಷನ್ ಇದ್ದಿದ್ರಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರತಾಪ್ ಕುಮಾರ್ ಸಾವನ್ನಪ್ಪಿದ್ದಾರೆ.

ಮಾವ ಬಿ.ಸಿ ಪಾಟೀಲ್ ಹೇಳುವಂತೆ ಪ್ರತಾಪ್ ಮತ್ತು ಅವರ ದೊಡ್ಡ ಮಗಳಿಗೆ ಮದುವೆ ಮಾಡಿದ್ದರೂ 16 ವರ್ಷಗಳ ಕಾಲ ಮಕ್ಕಳಾಗಿಲ್ಲ ಎನ್ನುವ ಕೊರಗಿನಲ್ಲಿದ್ದರಂತೆ. ಹೀಗಾಗಿ ಪ್ರತಾಪ್ ಮಕ್ಕಳು ಆಗಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಶರಣಾದ್ರಾ? ಎನ್ನುವ ಶಂಕೆ ವ್ಯಕ್ತವಾಗಿದೆ.


Share It

You cannot copy content of this page