ನವದೆಹಲಿ: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಏಕೈಕ ಪ್ರಯಾಣಿಕರೊಬ್ಬರು ಬದುಕುಳಿದಿದ್ದಾರೆ. ಉಳಿದ 241 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಆತನೊಬ್ಬ ಬದುಕಿದ್ದು ಹೇಗೆ ಎಂಬುದೀಗ ಇಡೀ ಜಗತ್ತಿಗೆ ಕುತೂಹಲದ ಪ್ರಶ್ನೆಯಾಗಿದೆ. ಅವರಿಗೆ ಬದುಕುವ ಮತ್ತೊಂದು ಅದೃಷ್ಟ ತಂದುಕೊಟ್ಟಿದ್ದು ಅವರು ಕುಳಿತಿದ್ದ ಸೀಟ್ ನಂಬರ್ ಎಂಬ ವಾದವೂ ಇದೀಗ ಶುರುವಾಗಿದೆ. ಇದಕ್ಕೆ ಅದೇ ಸೀಟ್ ನಂಬರಿನಲ್ಲಿದ್ದು ಸಾವು ಗೆದ್ದು ಬಂದಿದ್ದ ವ್ಯಕ್ತಿಯೊಬ್ಬರು ದನಿಗೂಡಿಸಿದ್ದಾರೆ.
1998 ರಲ್ಲಿ ಥಾಯ್ ಏರ್ ಲೈನ್ಸ್ ನ ವಿಮಾನ ಅಪಘಾತದಲ್ಲಿ101 ಜನ ಸಾವನ್ನಪ್ಪಿದ್ದರು. ಆಗ 11 A ಸೀಟಿನಲ್ಲಿ ರುವಾಂಗ್ಸಾಕ್ ಲೊಯ್ಚುಸಾಕ್ ಎಂಬ ಥಾಯ್ ಗಾಯಕ ಕುಳಿದಿದ್ದರು. ಯಾವುದೇ ಪ್ರಾಣಾಪಾಯವಿಲ್ಲದೆ ಅವರು ಬದುಕುಳಿದಿದ್ದರು.
ವಿಮಾನದಲ್ಲಿ 131 ಪ್ರಯಾಣಿಕರು ಮತ್ತು 14 ಜನ ಸಿಬ್ಬಂದಿ ಇದ್ದರೂ, 101 ಜನ ಸಾವನ್ನಪ್ಪಿದ್ದರು. 45 ಜನ ಗಾಯಗಳೊಂದಿಗೆ ಬದುಕುಳಿದಿದ್ದರು. ಆದರೆ, 11 A ಸೀಟಿನಲ್ಲಿ ಕುಳಿತಿದ್ದ ಈ ವ್ಯಕ್ತಿ ಮಾತ್ರ ಯಾವುದೇ ಗಾಯವೂ ಇಲ್ಲದೆ ಬದುಕುಳಿದಿದ್ದರು.
ಈ ವಿಷಯವನ್ನು ಸ್ವತಃ 47 ವರ್ಷದ ರುವಾಂಗ್ಸಾಕ್ ಲೊಯ್ಚುಸಾಕ್ ಹಂಚಿಕೊಂಡಿದ್ದು, ತಾನೂ ಈಗಲೂ ವಿಮಾನ ಹಾರಾಟ ಎಂದ ಭಯಪಡುವ ರೀತಿಯನ್ನು ವಿವರಿಸಿದ್ದಾರೆ. ಅಂದು ತಮಗಾದ ಅನುಭವ ಹಂಚಿಕೊಂಡಿದ್ದು, ಬದುಕುಳಿದ ವ್ಯಕ್ತಿಗೆ ಅಭಿನಂದನೆ ಸಲ್ಲಿಸುವ ಜತೆಗೆ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಇದೀಗ ಗುಜರಾತ್ ವಿಮಾನ ದುರಂತದಲ್ಲಿ ವಿಶ್ವಾಸ್ ಕುಮಾರ್ ಎಂಬ ಭಾರತೀಯ ಮೂಲದ ಬ್ರಿಟನ್ ಪ್ರಜೆ ಬದುಕುಳಿದಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ಅವರು ಕೂಡ 11A ಸೀಟ್ ನಲ್ಲಿದ್ದರು. ಅಪಘಾತದಲ್ಲಿ11J ಸೀಡ್ ನಲ್ಲಿ ಕುಳಿತಿದ್ದ ಅವರ ಸಹೋದರ ಅಜಯ್ ಕುಮಾರ್ ಪ್ರಾಣ ಕಳೆದುಕೊಂಡಿದ್ದಾರೆ.
ಇದೀಗ 11A ಸೀಟ್ ವಿಮಾನ ಹಾರಾಟ ಮಾಡುವವರ ಫೆವರೇಟ್ ಸೀಟ್ ಆಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಚರ್ಚೆಗಳು ಆರಮಭವಾಗಿವೆ. ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತಿವೆ.