ತುಮಕೂರು : ಮಧುಗಿರಿ ರಸ್ತೆಯಲ್ಲಿರುವ ಕರ್ನಾಟಕ ಆಗ್ರೋ ಕೆಮಿಕಲ್ಸ್ ಘಟಕದ ಮೇಲೆ ಕೃಷಿ ಇಲಾಖೆ ಅಧಿಕಾರಿಗಳಿಂದ ಜೂನ್ ೨೬ರಂದು ನಡೆದ ದಾಳಿಯಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ೧.೨೩ ಲಕ್ಷ ರೂ. ಮೌಲ್ಯದ ೧೧ ಟನ್ ರಸಗೊಬ್ಬರವನ್ನು ಜಪ್ತಿ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ(ಜಾರಿದಳ-೧) ಪುಟ್ಟರಂಗಪ್ಪ ತಿಳಿಸಿದ್ದಾರೆ.
ಪರವಾನಗಿ ಇಲ್ಲದೆ ಅನಧಿಕೃತವಾಗಿ ರಸಗೊಬ್ಬರ ಉತ್ಪಾದಿಸಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಕರ್ನಾಟಕ ಆಗ್ರೋ ಕೆಮಿಕಲ್ಸ್ ಘಟಕದಿಂದ ೧೧ ಟನ್ ಲಘು ಪೋಷಕಾಂಶ ಮಿಶ್ರಣದ ‘ಸಮೃದ್ಧಿ’ ರಸಗೊಬ್ಬರವನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಘಟಕವನ್ನು ಪರಿಶೀಲನೆ ನಡೆಸಲಾಗಿದ್ದು, ಲಘು ಪೋಷಕಾಂಶ ಮಿಶ್ರಣದ ರಸಗೊಬ್ಬರ ಉತ್ಪಾದನೆ, ಮಾರಾಟ ಪರವಾನಗಿ ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ದಾಖಲೆಗಳನ್ನು ಸಲ್ಲಿಸದ ಕಾರಣಕ್ಕೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ರಸಗೊಬ್ಬರವನ್ನು ಜಪ್ತಿ ಮಾಡಲಾಗಿದೆ.
ದಾಳಿಯ ನೇತೃತ್ವನ್ನು ಬೆಂಗಳೂರಿನ ಉಪ ಕೃಷಿ ನಿರ್ದೇಶಕಿ(ಜಾಗೃತ ಕೋಶ) ಡಾ|| ಅನೀಸ್ ಸಲ್ಮಾ.ಕೆ. ವಹಿಸಿಕೊಂಡಿದ್ದರು. ಸಹಾಯಕ ಕೃಷಿ ನಿರ್ದೇಶಕ (ಜಾಗೃತ ಕೋಶ) ರೇಣುಕಾ ಪ್ರಸನ್ನ, ತುಮಕೂರಿನ ಸಹಾಯಕ ಕೃಷಿ ನಿರ್ದೇಶಕ(ಜಾರಿದಳ-೨) ಅಸ್ವತ್ಥ ನಾರಾಯಣ ದಾಳಿಯಲ್ಲಿ ಪಾಲ್ಗೊಂಡಿದ್ದರು. ಸಹಾಯಕ ಕೃಷಿ ನಿರ್ದೇಶಕ(ಜಾರಿದಳ-೧) ಪುಟ್ಟರಂಗಪ್ಪ ಅವರು ಜಪ್ತಿ ಕಾರ್ಯವನ್ನು ಕೈಗೊಂಡಿದ್ದರು.