ಮುಂಬಯಿ: ಅಟಲ್ ಸೇತುವೆ ದೇಶದ ಗಮನ ಸೆಳೆದಿದ್ದು, ಪುಣೆ ಮತ್ತು ನವಿ ಮುಂಬಯಿ ನಡುವಿನ ಸಂಪರ್ಕ ಸೇತುವೆಯಾಗಿದೆ. ಆದರೆ, ಇದೀಗ ಆತ್ಮಹತ್ಯೆಯ ತಾಣವಾಗುತ್ತಿರುವ ಆರೋಪ ಕೇಳಿಬಂದಿದೆ.
ಅಟಲ್ ಸೇತುವೆ 2024 ರ ಜನವರಿ 13 ರಲ್ಲಿ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ ಗೊಂಡಿತ್ತು. ಅಲ್ಲಿಂದ ಇಲ್ಲಿವರೆಗೆ ನಾಲ್ಕು ಆತ್ಮಹತ್ಯೆ ಘಟನೆಗಳು ವರದಿಯಾಗಿವೆ. ನಿರ್ಜನ ಪ್ರದೇಶವಾದ ಕಾರಣ ಆತ್ಮಹತ್ಯೆ ಮಾಡಿಕೊಳ್ಳಲು ಅತ್ಯಂತ ಸುರಕ್ಷತೆಯ ತಾಣವಾಗಿದೆ. ಹೀಗಾಗಿ, ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ
ಅಟಲ್ ಸೇತುವೆ ಸುಮಾರು 21.8 ಕಿ.ಮೀ.ಉದ್ದವಿದ್ದು, 16.5 ಕಿ.ಮೀ ಸಮುದ್ರದ ಮೇಲೆ ನಿರ್ಮಾಣವಾಗಿದ್ದು, 5.5. ಕಿ.ಮೀ ದೂರ ಭೂಮಿಯ ಮೇಲೆ ನಿರ್ಮಾಣವಾಗಿದೆ. ಇದರಲ್ಲಿ 10 ಕಿ.ಮೀ ದೂರ ನವಿ ಮುಂಬಯಿ ಕಮೀಷನರೇಟ್ ವ್ಯಾಪ್ತಿಯಲ್ಲಿದೆ. ಇದರಲ್ಲಿ 1.5 ಕಿ.ಮೀ ದೂರ ಆತ್ಮಹತ್ಯೆ ತಾಣವಾಗಿದೆ.
ಸಿಸಿಟಿವಿಯಲ್ಲಿ ಇಲ್ಲಿನ ಎಲ್ಲ ಘಟನೆಗಳು ದಾಖಲಾಗುತ್ತವೆಯಾದರೂ, ಆತ್ಮಹತ್ಯೆ ತಡೆಯಲು ಸಾಧ್ಯವಾಗುತ್ತಿಲ್ಲ. ಅನಂತರ ಪರಿಶೀಲನೆ ನಡೆಸಿದರೂ, ಸಮುದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಶವ ಹುಡುಕುವುದು ಕೂಡ ಸವಾಲಾಗಿದೆ.
ಆತ್ಮಹತ್ಯೆ ಘಟನೆಗಳು:
ಮಾ.18 ವೈದ್ಯರೊಬ್ಬರು ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಜು.24 38 ವರ್ಷ ಎಂಜಿನಿಯರ್ ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿತ್ತು. ಸೆ.2 ಪುಣೆಯ 35 ವರ್ಷದ ಬ್ಯಾಂಕರ್ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿತ್ತು. ಆ.17 ರಂದು 56 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ಕ್ಯಾಬ್ ಡ್ರೈವರ್ ಆಕೆಯನ್ನು ಕಾಪಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿತ್ತು.