ನವದೆಹಲಿ : ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಎಎಪಿ ನಾಯಕ ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಕಳೆದ ಆಗಸ್ಟ್ 6ರಂದು ಸಿಸೋಡಿಯಾ ಜಾಮೀನು ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ತನ್ನ ತೀರ್ಪು ಕಾಯ್ದಿರಿಸಿತ್ತು. 530 ದಿನಗಳ ನಂತರ ಅಂದರೆ 17 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಮನೀಶ್ ಸಿಸೋಡಿಯಾ ಹೊರಬರಲಿದ್ದಾರೆ.
ರದ್ದಾದ ದೆಹಲಿ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನದಲ್ಲಿರುವ ಅಕ್ರಮಗಳಲ್ಲಿ ಭಾಗಿಯಾಗಿದ್ದಕ್ಕಾಗಿ 2023ರ ಫೆಬ್ರವರಿ 26 ರಂದು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು.
ಇದಾದ ಬಳಿಕ ಸಿಬಿಐ ಎಫ್ಐಆರ್ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಿಸೋಡಿಯಾ ಅವರನ್ನು ಮಾರ್ಚ್ 9ರಂದು ಬಂಧಿಸಿತ್ತು. ಬಳಿಕ ಸಿಸೋಡಿಯಾ ಅವರು ಫೆಬ್ರವರಿ 28 ಎಂದು ದೆಹಲಿ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇಡಿ ಹಾಗೂ ಸಿಬಿಐ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿವೆ. ಹಗರಣದಲ್ಲಿ ಅವರ ಆಳವಾದ ಪಾತ್ರವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಂಸ್ಥೆ ಹೊಂದಿದೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯದ ಮುಂದೆ ಹೇಳಿಕೊಂಡಿದೆ.

