ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರೋಧಿ ಬಣ ದಿನೇದಿನೆ ಬೆಳೆಯುತ್ತಿದ್ದು, ಇದೀಗ ಮಾಜಿ ಸಚಿವ ಡಾ. ಸುಧಾಕರ್ ಬಹಿರಂಗವಾಗಿ ಮುನ್ನೆಲೆಗೆ ಬಂದಿದ್ದಾರೆ.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗಿನಿಂದಲೂ ಅವರ ವಿರುದ್ಧ ಯತ್ನಾಳ್ ಸೇರಿ ಕೆಲವರು ಕಿಡಿಕಾರುತ್ತಲೇ ಬಂದಿದ್ದರು. ಅವರ ಸಾಲಿಗೆ ಟಿಕೆಟ್ ವಂಚಿತರು, ಹಿರಿಯ ಕೆಲವು ರಾಜಕಾರಣಿಗಳು ಸೇರಿಕೊಂಡರು. ಆ ಪಟ್ಟಿ ನಿಯಮಿತವಾಗಿ ಬೆಳೆಯುತ್ತಾ ಹೋಯಿತು.
ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಸಿ.ಟಿ.ರವಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ತಿರುಗಿಬಿದ್ದರು. ಇವರೆಲ್ಲರೂ ಪಕ್ಷಕ್ಕೆ ನಿಷ್ಠರಾಗಿದ್ದರೂ, ರಾಜ್ಯಾಧ್ಯಕ್ಷರ ನಡೆಯ ವಿರುದ್ಧ ತಮ್ಮದೇ ಆದ ಧೋರಣೆಯನ್ನು ಹೊಂದಿದ್ದಾರೆ.
ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟುಹಿಡಿದಿರುವ ಈ ಎಲ್ಲ ನಾಯಕರ ದನಿಗೆ ಇದೀಗ ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ.ಕೆ.ಸುಧಾಕರ್ ಸೇರಿಕೊಂಡಿದ್ದಾರೆ. ವಿಜಯೇಂದ್ರ ಬದಲಾವಣೆ ಮಾತುಗಳನ್ನಾಡುವ ಎಲ್ಲರನ್ನೂ ಸಮಾಧಾನ ಮಾಡುವ ಬದಲು ಅವರನ್ನೇ ಬದಲಿಸಿ ಎಂದು ಹೈಕಮಾಂಡ್‌ಗೆ ಸಲಹೆ ನೀಡಿದ್ದಾರೆ.
ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಸಿಟ್ಟು ಹೊರಹಾಕಿರುವ ಡಾ. ಸುಧಾಕರ್, “ನಿಮಗೆ ಜೀ ಹುಜುರ್ ಅನ್ನೋರು ಬೇಕು, ಹಾಗೆ ನಿಮ್ಮೊಂದಿಗೆ ಸುತ್ತಾಡುವವರನ್ನು ಬಿಟ್ಟು ಉಳಿದವರ ಮೇಲೆ ನಿಮಗೆ ನಂಬಿಕೆ ಬರುವುದಿಲ್ಲ. ಹೀಗಾದರೆ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಜತೆಗೆ, ಸಮಾಧಾನ ಮುಗೀತು, ಇನ್ಮೇಲೆ ಏನಿದ್ದರೂ ಯುದ್ದ ಎಂದು ಗುಡುಗುವ ಮೂಲಕ ವಿಜಯೇಂದ್ರ ವಿರೋಧಿ ಬಣ ಮತ್ತಷ್ಟು ಬಲವಾಗುತ್ತಿರುವ ಮುನ್ಸೂಚನೆ ಕೊಟ್ಟಿದ್ದಾರೆ. ಎಲ್ಲರನ್ನೂ ಸಮಾಧಾನ ಮಾಡುವ ಬದಲು ಇವರನ್ನೇ ಬದಲಿಸಿ ಬಿಡಿ ಎಂದು ಹೈಕಮಾಂಡ್ ನಾಯಕರಿಗೂ ಸಲಹೆ ನೀಡಿದ್ದಾರೆ.