ಬೆಂಗಳೂರು: ದಲಿತ ಸಚಿವರ ಡಿನ್ನರ್ ಪಾರ್ಟಿಗೆ ಹೈಕಮಾಂಡ್ ತಡೆಹಾಕಿತ್ತು ಎಂಬ ಮಾತಿನ ನಡುವೆಯೂ ಹೈಕಮಾಂಡ್‌ಗೆ ಸೆಡ್ಡು ಹೊಡೆದು ದಲಿತ ಸಚಿವರು ವಿಧಾನಸೌಧದಲ್ಲೇ ಸಭೆ ನಡೆಸಿದ್ದಾರೆ.
ವಾಲ್ಮೀಕಿ ಶ್ರೀಗಳ ಭೇಟಿ ನೆಪದಲ್ಲಿ ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ ಸೇರಿದಂತೆ ಎಲ್ಲ ದಲಿತ ಸಚಿವರು ಸಭೆ ನಡೆಸಿದ್ದಾರೆ. ಆ ಮೂಲಕ ದಲಿತ ಸಚಿವರ ಡಿನ್ನರ್ ಪಾರ್ಟಿಗೆ ತಡೆಹಾಕಿದ್ದ ಹೈಕಮಾಂಡ್‌ಗೆ ಸಂದೇಶ ರವಾನೆ ಮಾಡಿದ್ದಾರೆ.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಸಭೆ ನಡೆಸಿದ ಬೆನ್ನಲ್ಲೇ ವಿದೇಶದಲ್ಲಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಮುಂದೆ ದೂರು ಹೊತ್ತು ತೆರಳಿದ್ದರು. ಈ ಕಾರಣಕ್ಕೆ ದಲಿತ ಸಚಿವರು ಮತ್ತು ಶಾಸಕರ ಸಭೆಯನ್ನು ಹೈಕಮಾಂಡ್ ನಡೆಸದಂತೆ ತಾಕೀತು ಮಾಡಿತ್ತು.
ದಲಿತ ನಾಯಕರ ಸಭೆಯನ್ನು ತಡೆಯಲು ಹೈಕಮಾಂಡ್ ಸೇರಿ ಯಾರಿಗೂ ಸಾಧ್ಯವಿಲ್ಲ ಎಂಬ ಹೇಳಿಕೆ ನೀಡುತ್ತಲೇ ಬಂದಿದ್ದ ದಲಿತ ಸಚಿವರು ಇಂದು ಸಭೆ ನಡೆಸುವ ಮೂಲಕ ಹೈಕಮಾಂಡ್‌ಗೆ ಮತ್ತು ಡಿ.ಕೆ.ಶಿವಕುಮಾರ್‌ಗೆ ಸಂದೇಶ ರವಾನೆ ಮಾಡಿದ್ದಾರೆ.
ರಾಜ್ಯದಲ್ಲಿ ದಲಿತ ಸಿಎಂ ಎಂಬ ಪ್ರಸ್ತಾಪ ಬಂದಿದ್ದೇ ಆದರೆ, ದಲಿತ ನಾಯಕರು ಕಿತ್ತಾಡಿಕೊಂಡು ಬೇರೆಯವರ ಪಾಲಾದ ಉದಾಹರಣೆಯೇ ಹೆಚ್ಚು. ಆದರೆ, ಈ ಸಲ ದಲಿತ ಸಿಎಂ ಪ್ರಸ್ತಾಪ ಬಂದದ್ದೇ ಆದರೆ, ನಾವೆಲ್ಲ ಒಂದಾಗಿದ್ದು, ಒಮ್ಮತದ ಸಿಎಂ ಆಯ್ಕೆಗೆ ಬದ್ಧ ಎಂಬ ಸಂದೇಶ ರವಾನೆ ಮಾಡಿದ್ದಾರೆ.
ದಲಿತ ಸಚಿವರ ಸಭೆಗೆ ಬೇರೆ ಅರ್ಥ ಕಲ್ಪಿಸುವುದು ಥರವಲ್ಲ ಎಂಬ ಹೇಳಿಕೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಕೂಡ ದಲಿತ ಸಚಿವರ ಸಭೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನು ಹೈಕಮಾಂಡ್ ಮತ್ತು ಡಿಕೆಶಿ ಹೇಗೆ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.