ದಲಿತ ವರನ ದಿಬ್ಬಣಕ್ಕೆ ವಿರೋಧ: ಕುದುರೆಯಿಂದ ಕೆಳಗಿಳಿಸಿ ಹಲ್ಲೆ, ಆರು ಜನರಿಗೆ ಗಾಯ
ಮೀರತ್: ದಲಿತ ವರನೊಬ್ಬನ ಮದುವೆ ಮೆರವಣಿಗೆಗೆ ಅಡ್ಡಿಪಡಿಸಿದ ಮೇಲ್ಜಾತಿ ಎನಿಸಿಕೊಂಡರು, ವರನನ್ನು ಕುದುರೆಯಿಂದ ಕೆಳಗೆಳೆದು ಬಿಸಾಕಿದ್ದು, ಆರು ಜನ ಸಂಬಂಧಿಕರಿಗೆ ಥಳಿಸಿದ್ದಾರೆ ಎನ್ನಲಾಗಿದೆ.
ಬುಲಂದ್ ಶಹರ್ ನ ಧಮ್ರವಲಿ ಗ್ರಾಮದಲ್ಲಿ ನಡೆದಿರುವ ಘಟನೆಯಲ್ಲಿ ಸುಮಾರು 40 ಕ್ಕೂ ಹೆಚ್ಚು ಮಂದಿ ಠಾಕೂರ್ ಸಮುದಾಯದ ವ್ಯಕ್ತಿಗಳು ಮಧುವೆ ದಿಬ್ಬಣ ಹೊರಟಿದ್ದ ವರ ಭಗವತ್ ಸಿಂಗ್ ಮತ್ತು ಆತನ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.
ಘಟನೆಗೆ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು 5 ಜನರನ್ನು ಬಂಧಿಸಿದ್ದಾರೆ. ಸುಮಾರು 30 ಜನರ ಗುರುತುಪತ್ತೆಹಚ್ಚಲಾಗಿದ್ದು, ಅವರ ಬಂಧನ ಕಾರ್ಯಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಲ್ಲರ ಮೇಲೆ ಜಾತಿ ನಿಂದನೆ, ಕೊಲೆ ಯತ್ನ ಸೇರಿ ಅನೇಕ ಪ್ರಕರಣಗಳನ್ನು ದಾಖಲಿಸಿ, ಎಫ್‌ಐಆರ್ ಮಾಡಲಾಗಿದೆ.
ದಿಬ್ಬಣದ ವೇಳೆ ಡಿಜೆ ಹಾಕಿದ್ದು ಮತ್ತು ದಿಬ್ಬಣ ತಮ್ಮ ಸಮುದಾಯದ ಬೀದಿಯಲ್ಲಿ ಹಾದುಹೋಗುವುದನ್ನು ಠಾಕೂರ್ ಸಮುದಾಯದ ಜನರು ವಿರೋಧಿಸಿದರು ಎನ್ನಲಾಗಿದೆ. ಆಗ ಕಬ್ಬಿಣದ ರಾಡ್ ಮತ್ತು ಚೂಪಾದ ಆಯುಧಗಳನ್ನು ಬಳಸಿ, ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಬಿಎನ್‌ಎಸ್ ಕಾಯ್ದೆಯ ಪ್ರಕಾರ, 191(2), 126(2), 324(4), 115(2), 352 ಹಾಗೂ ಎಸ್‌ಸಿ, ಎಸ್‌ಟಿ ಕಾಯ್ದೆಯ ಸೆಕ್ಷನ್ 3(1)(ಬಿ)(ಸಿ) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಎಸ್‌ಪಿ ರಿಜುಲ್ ಕುಮಾರ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.


