ಉಪಯುಕ್ತ ಸುದ್ದಿ

ಮಾ.9 ರಂದು ಮೆಟ್ರೋ ರೈಲು ಈ ನಿಲ್ದಾಣಗಳ ಮಧ್ಯೆ 3 ಗಂಟೆ ವ್ಯತ್ಯಯ

Share It

ಬೆಂಗಳೂರು: ನಾಳೆ ಭಾನುವಾರ (ಮಾ.9 ರಂದು) ನಗರದ ಮೆಟ್ರೋ ರೈಲಿನ ನೇರಳೆ ಮಾರ್ಗದಲ್ಲಿ ಮಾಗಡಿ ರಸ್ತೆ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ನಮ್ಮ ಮೆಟ್ರೋ ಸಂಚಾರ ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಸಂಚಾರ ಸ್ಥಗಿತಗೊಳ್ಳಲಿದೆ ಎಂದು BMRCL ತಿಳಿಸಿದೆ.

ನಮ್ಮ ಮೆಟ್ರೋ ನಿಗಮವು ಅಂದು ನೇರಳ ಮಾರ್ಗದಲ್ಲಿ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಯನ್ನು ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ (3 ಗಂಟೆಗಳ ಕಾಲ) ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮಾಗಡಿ ರಸ್ತೆ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ಯಾಣಗಳ ನಡುವಿನ ಮೆಟ್ರೋ ಸೇವೆಗಳನ್ನು ರದ್ದುಪಡಿಸಲಾಗುತ್ತದೆ ಎಂದು ತಿಳಿಸಿದೆ.

ಈ ಅವಧಿಯಲ್ಲಿ ಕಬ್ಬನ್ ಪಾರ್ಕ್, ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸ‌ರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ನೇರಳೆ ಮಾರ್ಗ) ಮತ್ತು ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣಗಳು ಮುಚ್ಚಲಾಗಿರುತ್ತದೆ ಎಂದು ಮಾಹಿತಿ ನೀಡಿದೆ.

ಬೆಳಗ್ಗೆ 10 ಗಂಟೆಯವರೆಗೆ ಈ ರದ್ದತಿಯ ಕಾರಣದಿಂದಾಗಿ, ಕ್ಯೂ ಆರ್ ಟಿಕೆಟ್‌ಗಳ ಖರೀದಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನೇರಳೆ ಮಾರ್ಗದಲ್ಲಿನ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್​ನಲ್ಲಿ ರೈಲು ಲಭ್ಯವಿರುವುದಿಲ್ಲವಾದ್ದರಿಂದ, ನೇರಳೆ ಮಾರ್ಗದಿಂದ ಹಸಿರು ಮಾರ್ಗಕ್ಕೆ ಮತ್ತು ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಪ್ರಯಾಣಿಸಲು ಸಾರ್ವಜನಿಕರು ಕ್ಯೂಆರ್ ಟಿಕೆಟ್ ಹಾಗೂ ಟೋಕನ್​ಗಳನ್ನು ಖರೀದಿಸದಂತೆ BMRCL ಸೂಚಿಸಿದೆ.

ನೇರಳೆ ಮಾರ್ಗದ ಇತರ ವಿಭಾಗಗಳಲ್ಲಿ ಅಂದರೆ, ಚಲ್ಲಘಟ್ಟ ಮತ್ತು ಮಾಗಡಿ ರಸ್ತೆ ನಡುವೆ, ಹಾಗೂ ಎಂಜಿ ರಸ್ತೆ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ನಡುವೆ, ರೈಲು ಸೇವೆಗಳು ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತವೆ ಮತ್ತು ಮೇಲಿನ ಅವಧಿಯಲ್ಲಿ ವೇಳಾಪಟ್ಟಿಯ ಪ್ರಕಾರ ಲಭ್ಯವಿರುತ್ತವೆ ಎಂದಿದೆ.

ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ರೈಲುಗಳ ಸೇವೆಗಳು ನಿಗದಿತ ಸಮಯ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತವೆ. ನಮ್ಮ ಮೆಟ್ರೋ ಪ್ರಯಾಣಿಕರು ಸದರಿ ಬದಲಾವಣೆಯನ್ನು ಗಮನಿಸಬೇಕೆಂದು BMRCL ಕೋರಿದೆ. ಪ್ರಯಾಣಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ಕೂಡ BMRCL ವಿಷಾದಿಸಿದೆ.


Share It

You cannot copy content of this page