ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಮಾತನಾಡಿ, ಪಕ್ಷದ ಇಬ್ಬರು ಬಂಡಾಯ ಶಾಸಕರಾದ ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ವಿರುದ್ಧ ಶಿಸ್ತುಕ್ರಮ ಆಗುತ್ತೆ. ಪಕ್ಷ ದ್ರೋಹ ಕೆಲಸ ಮಾಡಿದ ಈ ಇಬ್ಬರು ಶಾಸಕರ ವಿರುದ್ಧ ಈ ತಿಂಗಳಾಂತ್ಯದಲ್ಲಿ ಶಿಸ್ತುಕ್ರಮ ಆಗುತ್ತೆ ಎಂದು ಕಡ್ಡಿಮುರಿದಂತೆ ಹೇಳಿದರು.
ಅಲ್ಲದೇ ಪಕ್ಷದಲ್ಲಿರುವ ಎಲ್ಲಾ ಗೊಂದಲಕ್ಕೆ ಈ ತಿಂಗಳಾಂತ್ಯಕ್ಕೆ ತೆರೆ ಬೀಳುತ್ತೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಇಬ್ಬರು ರೆಬೆಲ್ ಶಾಸಕರು ಹಾಗೂ ಯತ್ನಾಳ್-ವಿಜಯೇಂದ್ರ ಬಣ ಬಡಿದಾಟಕ್ಕೆ ಅಂತ್ಯವಾಡುವ ಸುಳಿವು ನೀಡಿದರು.
ವಿಧಾನಸಭೆ ಚುನಾವಣೆ ನಂತರ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ನಿರಂತರವಾಗಿ ಪಕ್ಷ ದ್ರೋಹ ಕೆಲಸ ಮಾಡಿದ್ದಾರೆ. ಪ್ರತಿ ಚುನಾವಣೆಯಲ್ಲೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ನ ಡಿನ್ನರ್ ಪಾರ್ಟಿಗೆ ಹೋಗಿರುವ ವಿಚಾರ ದೊಡ್ಡದಲ್ಲ. ಅದಕ್ಕಿಂತ ಹೆಚ್ಚಿನ ಪಕ್ಷ ವಿರೋಧಿ ಚಟುವಟಿಕೆಗಳನ್ನು ಅವರಿಬ್ಬರೂ ಮಾಡಿದ್ದಾರೆ. ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಕ್ಷೇತ್ರಕ್ಕೆ ತೆರಳಿ ಬಿಜೆಪಿ ಕಾರ್ಯಕರ್ತರು, ಮಂಡಳ ಅಧ್ಯಕ್ಷರು, ಜಿಲ್ಲಾಧ್ಯಕ್ಷರಿಂದ ವರದಿ ಸಿದ್ಧಪಡಿಸಿ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಟೀಲ್ ಅವರಿಗೆ ವರದಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ವಿಡಿಯೋ, ಪೇಪರ್ ಕಟಿಂಗ್‌ಗಳನ್ನು ವರದಿಯ ಜೊತೆಗೆ ಸಲ್ಲಿಸಲಾಗಿದೆ. ಇಲ್ಲಿಯವರೆಗೂ ಎರಡ್ಮೂರು ಬಾರಿ ಕೇಂದ್ರಕ್ಕೆ ವರದಿ ನೀಡಲಾಗಿದೆ. ಆದಷ್ಟು ಬೇಗ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ವಿರುದ್ಧ ಶಿಸ್ತುಕ್ರಮವಾಗಲಿದೆ ಎಂದು ಅವರು ತಿಳಿಸಿದರು.
ಲಿಂಗರಾಜ್ ಪಾಟೀಲ್ ಹೇಳಿರುವಂತೆ ಈ ತಿಂಗಳಾಂತ್ಯಕ್ಕೆ ರಾಜ್ಯ ಬಿಜೆಪಿಯಲ್ಲಿನ ಗೊಂದಲ ನಿವಾರಣೆಯಾಗಲಿದೆ ಎಂದು ಹೇಳಿದ್ದಾರೆ. ಹಾಗಾದ್ರೆ, ಯತ್ನಾಳ್ ಹಾಗೂ ವಿಜಯೇಂದ್ರ ಬಣ ರಾಜಕೀಯಕ್ಕೆ ಬ್ರೇಕ್ ಬೀಳುತ್ತದೆಯೇ? ಎನ್ನುವುದನ್ನು ಕಾದುನೋಡಬೇಕಿದೆ. ಒಂದು ವೇಳೆ ಎಲ್ಲವೂ ಸರಿಯಾದರೆ ಯಾವ ಬಣ ಮೇಲುಗೈ ಸಾಧಿಸಲಿದೆ ಎನ್ನುವುದು ಸಹ ಕುತೂಹಲ ಮೂಡಿಸಿದೆ.
ಮತ್ತೊಂದೆಡೆ ಆಪರೇಷನ್ ಕಮಲದ ಮೂಲಕ ಪಕ್ಷ ಸೇರಿ ಸಚಿವರಾಗಿ ನಂತರ ಮತ್ತೆ ಬಿಜೆಪಿಯಿಂದಲೇ ಶಾಸಕರಾಗಿದ್ದರೂ ಕಾಂಗ್ರೆಸ್ ಶಾಸಕರಂತೆ ವರ್ತಿಸುತ್ತಿರುವ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರು ಪಕ್ಷದ ಕಾರ್ಯಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಶಿಸ್ತು ಸಮಿತಿ ಯಾವ ಕ್ರಮಕೈಗೊಳ್ಳುತ್ತೆ? ಎಂಬುದು ಕುತೂಹಲ ಕೆರಳಿಸಿದೆ.