ಬೆಂಗಳೂರು: ಅನುಕಂಪದ ಆಧಾರದಲ್ಲಿ ನೌಕರಿ ಕೊಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ವಹಿಸುವಂತೆ ಸರಕಾರ ಅಧಿಸೂಚನೆ ಹೊರಡಿಸಿದೆ.
ಅನುಕಂಪದ ಆಧಾರದ ನೌಕರಿ ನೀಡುವುದು ಸೇವೆಯಲ್ಲಿದ್ದಾಗ ನಿಧನರಾಗುವ ಸಿಬ್ಬಂದಿಯ ಕುಟುಂಬದ ಆತ್ಮರಕ್ಷಣೆಗಾಗಿ ನೌಕರಿ ನೀಡುವ ವ್ಯವಸ್ಥೆಯಾಗಿದ್ದು, ಇದನ್ನು ಹಕ್ಕೊತ್ತಾಯ ಮಾಡಲು ಅವಕಾಶವಿಲ್ಲ. ಆದರೆ, ಸರಕಾರ ಅನುಕಂಪದ ಆಧಾರದ ನೌಕರಿ ನೀಡಲು ಹಾಕಿರುವ ಷರತ್ತು ಮತ್ತು ನಿಬಂಧನೆಗಳನ್ನು ಪೂರೈಸಿದ್ದಲ್ಲಿ ನೌಕರಿ ನೀಡಲಾಗುತ್ತದೆ.
ಅನುಕಂಪದ ಆಧಾರದಲ್ಲಿ ಹುದ್ದೆ ನೀಡುವಾಗ ಸಚಿವಾಲಯದ ಸಹಾಯಕ ಹುದ್ದೆಯ ವೇತನ ಶ್ರೇಣಿ ಮೀರದಂತಹ ಗರಿಷ್ಠ ಗ್ರೂಪ್ ಸಿ ಅಥವಾ ಗ್ರೂಪ್ ಡಿ ಹುದ್ದೆ ನೀಡಬಹುದು. ಹುದ್ದೆಗಾಗಿ ಅರ್ಜಿ ಸಲ್ಲಿಸಿದಾಗ ಯಾವ ನಿಯಮ ಜಾರಿಯಲ್ಲಿರುತ್ತದೆಯೋ ಆ ಪ್ರಕಾರ ನಿರ್ಧರಿಸಬೇಕಿರುತ್ತದೆ ಹಾಗೂ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಾಲಮಿತಿಯೊಳಗೆ ಹೊಂದಿರುವ ವಿದ್ಯಾರ್ಹತೆ ಪರಿಗಣಿಸಿ ನೇಮಕಾತಿ ನೀಡಬೇಕಾಗಿರುತ್ತದೆ.
ಆದರೆ, ಕೆಲವು ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ವಿದ್ಯಾರ್ಹತೆ ಪರಿಗಣಸದೇ ಕೆಳಹಂತದ ಹುದ್ದೆಗಳಿಗೆ ನೇಮಕಾತಿ ಮಾಡಿರುವ ಬಗ್ಗೆ ದೂರುಗಳು ಬಂದಿದ್ದು, ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ನೌಕರಿ ನೀಡುವ ವಿಚಾರದಲ್ಲಿ ಸಾಮಾನ್ಯ ನಿಯಮಗಳಿಗೆ ಅನ್ವಯಿಸುವಂತೆ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿ ತಾರತಮ್ಯ ಮಾಡದೆ ನಿಯಮದಂತೆಯೇ ವಿದ್ಯಾರ್ಹತೆಗೆ ತಕ್ಕದಾದ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬೇಕು. ಇದರಲ್ಲಿ ನಿಯಮ ಉಲ್ಲಂಘನೆ ಮಾಡುವ ಅಧಿಕಾರಿಗಳ ವಿರುದ್ಧ ಸಕ್ಷವi ಪ್ರಾಧಿಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸರಕಾರ ಆದೇಶ ನೀಡಿದೆ.