ಉಪಯುಕ್ತ ಸುದ್ದಿ

ಮಹಿಳೆಯರಿಗೆ ನೈಟ್ ವಾಕ್ ಚಾಲೆಂಜ್: ನಾಲ್ಕು ಲಕ್ಷ ಕಳೆದುಕೊಂಡ ಯುವಕ

Share It

ಬೆಂಗಳೂರು: ಊಟ ಮುಗಿಸಿ ಸುಮ್ಮನೆ ಕುಳಿತಿದ್ದ ಮಹಿಳೆಯರ ಜತೆಗೆ ನೈಟ್ ವಾಕಿಂಗ್ ಚಾಲೆಂಜ್ ಹಾಕಿದ ಯುವಕನೊಬ್ಬ 4 ಲಕ್ಷ ರುಪಾಯಿ ಕಳೆದುಕೊಂಡ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ರಾಜಧಾನಿಯಿಂದ ಸುಮಾರು 65 ಕಿ.ಮೀ ದೂರದ ಕಾರಂಜಿಕಟ್ಟೆ ಗ್ರಾಮದಲ್ಲಿ ಊಟ ಮುಗಿಸಿ ರಾತ್ರಿ ಮಹಿಳೆಯರೆಲ್ಲ ಹರಟುತ್ತಾ ಕುಳಿತಿದ್ದರು. ಈ ವೇಳೆ ಕೇದರನಾಥ ಮತ್ತು ಬದರಿನಾಥಕ್ಕೆ ತೆರಳುವ ಕುರಿತು ಮಾತನ್ನಾಡುತ್ತಿದ್ದರು. ಆಗ ಮಧ್ಯಪ್ರವೇಶಿಸಿದ ಯುವಕ “ಕೇದಾರನಾಥಕ್ಕೆ ಹೋಗಿವಿರಂತೆ, ಮೊದಲು ನಮ್ಮೂರಿಂದ 15 ಕಿ.ಮೀ. ದೂರದಲ್ಲಿರುವ ನರಸಾಪುರಕ್ಕೆ ಹೋಗಿ’ ಎಂದು ಚಾಲೆಂಜ್ ಮಾಡಿದ್ದ.

ಯುವಕನ ಚಾಲೆಂಜ್ ಅನ್ನು ಮಹಿಳೆಯರು ಒಪ್ಪುತ್ತಿದ್ದಂತೆ ನೀವು ನಿಲ್ಲದಂತೆ 15 ಕಿ.ಮೀ ನಡೆದರೆ ತಲಾ 10 ಗ್ರಾಂ ಚಿನ್ನ ಕೊಡ್ತೇನೆ. ಅದರ ಬದಲು 1 ಲಕ್ಷ ರು ಬಹುಮಾನ ಕೊಡ್ತೇನೆ ಎಂದು ತಮಾಷೆ ಮಾಡುತ್ತಿದ್ದ. ಆದರೆ, ಮಹಿಳೆಯರು ಇದಕ್ಕೆಲ್ಲ ಒಪ್ಪುವುದು ಸಾಧ್ಯವಿಲ್ಲ ಎಂದು ಯುವಕ ಭಾವಿಸಿದ್ದ.

ಇದಕ್ಕೆ ಒಪ್ಪಿದ ಮಹಿಳೆಯರು ನಡಿಗೆಯನ್ನು ಆರಂಭಿಸಿಯೇ ಬಿಟ್ಟರು. ಇದಕ್ಕೆ ಕೆಲವು ಗ್ರಾಮಸ್ಥರು ಮಧ್ಯಸ್ಥರಾಗಿ ಸೇರಿ, ಮಹಿಳೆಯರ ಕುಟುಂಬಸ್ಥರು ಸೇರಿ ಒಪ್ಪಂದಕ್ಕೆ ಬಂದರು. ಇದರ ಫಲವಾಗಿ 10.45 ಕ್ಕೆ ಮಹಿಳೆಯರು ನಡಿಗೆಯನ್ನು ಆರಂಭಿಸಿದರು.

ಮಹಿಳೆಯರನ್ನು ಒಂದು ಕಾರು, ಮುಂದೊAದು ಕಾರು ಹಿಂಬಾಲಿಸಿತು. ಗ್ರಾಮದ ಯುವಕರು ಬೈಕ್‌ನಲ್ಲಿ ಬೆಂಗಾವಲಾಗಿ ಹೊರಟರು. 5 ಕಿ.ಮೀ ಸತತವಾಗಿ ನಡೆಯುತ್ತಿದ್ದಂತೆ ಮಹಿಳೆಯರು ಗೆಲ್ಲುವ ಸೂಚನೆ ಸಿಗುತ್ತಿದ್ದಂತೆ ಯುವಕ ತಲಾ 10 ಸಾವಿರ ಕೊಡುವುದಾಗಿ ಮನವೊಲಿಸಲಾರಂಭಿಸಿದ.

10 ಕಿ.ಮೀ ದೂರ ಕ್ರಮಿಸುತ್ತಿದ್ದಂತೆ ತಲಾ 50 ಸಾವಿರ ಕೊಡುತ್ತೇನೆ ನಡೆಗೆ ನಿಲ್ಲಿಸಿ ಎಂದು ಕೇಳಿಕೊಂಡ. ಆದರೆ, ಮಹಿಳೆಯರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸತತವಾಗಿ ನಡೆಯುತ್ತಲೇ ಸಾಗಿದರು. ಅಂತಿಮವಾಗಿ 15 ಕಿ.ಮೀ ಗುರಿಮುಟ್ಟಿದರು.

ತನ್ನ ಸೋಲನ್ನು ಒಪ್ಪಿಕೊಂಡ ಯುವಕ ಮಹಿಳೆಯರಿಗೆ ಸ್ಥಳದಲ್ಲಿಯೇ ತಲಾ ೫೦ ಸಾವಿರ ರು. ಹಣವನ್ನು ಕೊಟ್ಟಿದ್ದು, ಉಳಿದ ತಲಾ ೫೦ ಸಾವಿರ ಹಣವನ್ನು ಒಂದು ವಾರದಲ್ಲಿ ನೀಡುವುದಾಗಿ ಭರವಸೆ ನೀಡಿದ್ದಾನೆ ಎನ್ನಲಾಗಿದೆ.

ರಾತ್ರಿ 10.30 ಕ್ಕೆ ತಮ್ಮ ನಡಿಗೆಯನ್ನು ಆರಂಭಿಸಿದ ಮಹಿಳೆಯರು ರಾತ್ರಿ ಸುಮಾರು 1.10 ರ ಸುಮಾರಿಗೆ 15 ಕಿ.ಮೀ ದೂರದ ನರಸಾಪುರವನ್ನು ತಲುಪಿದರು. ಎನ್ನಲಾಗುತ್ತಿದೆ. ಈ ವಿಷಯ ಸುತ್ತಮುತ್ತಲ ಗ್ರಾಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಪಹಾಸ್ಯ ಮಾಡುತ್ತಾರೆಂಬ ಕಾರಣಕ್ಕೆ ಕೆಲವರು ಮಾಹಿತಿಯನ್ನು ಮುಚ್ಚಿಡುತ್ತಿದ್ದಾರೆ.


Share It

You cannot copy content of this page