ಮನೆ ಮುಂದೆ ಮಲಗಿದ್ದ ವ್ಯಕ್ತಿಯ ಮೇಲೆ ಆನೆ ದಾಳಿ
ಚಿಕ್ಕಮಗಳೂರು: ಕಾಫಿ ಹಣ್ಣುಗಳನ್ನು ಕಾಯಲು ಮನೆ ಮುಂದಿನ ಕಣದಲ್ಲಿ ಮಲಗಿದ್ದ ವ್ಯಕ್ತಿಯನ್ನು ಒಂಟಿಸಲಗವೊAದು ತುಳಿದು ಗಾಯಗೊಳಿಸಿರುವ ಘಟನೆ ಜಿಲ್ಲೆಯ ಆಲ್ದೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹುಕ್ಕುಂದ ಗ್ರಾಮದಲ್ಲಿ ಆನೆ ದಾಳಿ ನಡೆದಿದ್ದು, ರೈತ ಸತ್ಯಾನಾರಾಯಣ ಎಂಬುವವರು, ಕಣದಲ್ಲಿ ಮಲಗಿದ್ದಾಗ ತುಳಿದು ಗಾಯಗೊಳಿಸಿದೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತಾಲೂಕು ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಆನೆಗಳ ಕಾಟ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಕ್ರಮ ತೆಗೆದುಕೊಳ್ಳಲು ವಿಫಲವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಆಲ್ದೂರು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಅನೇಕ ಬಾರಿ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳದೆ, ಈಗ ವ್ಯಕ್ತಿಯೊಬ್ಬರ ಜೀವ ಹೋಗುವ ಹಂತಕ್ಕೆ ಬಂದಿದೆ ಎಂದು ಕಿಡಿಕಾರಿದ್ದಾರೆ.


