ರಾಜಕೀಯ ಸುದ್ದಿ

ದಿಲ್ಲಿ ಕಡೆಗೆ ದಲಿತ ದಂಡಯಾತ್ರೆ :ಏನಿದರ ರಹಸ್ಯ ?

Share It

ಬೆಂಗಳೂರು: ದಲಿತ ನಾಯಕರ ಡಿನ್ನರ್ ಪಾರ್ಟಿಗೆ ಬ್ರೇಕ್ ಬಿದ್ದು ಅನೇಕ ದಿನವಾಗಿದೆ. ಇದೀಗ ದಲಿತ ನಾಯಕರ ದೆಹಲಿ ದಂಡಯಾತ್ರೆಗೆ ತಯಾರಿ ನಡೆದಿದೆ. ಈ ತಯಾರಿ ಹಿಂದಿನ ಮರ್ಮವೇನು? ಎಂಬುದು ಇದೀಗ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಪಾರ್ಟಿ ನಡೆದ ಬೆನ್ನಲ್ಲೇ ಹೈಕಮಾಂಡ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಣ್ಣು ಕೆಂಪಾಗಿತ್ತು. ಹೀಗಾಗಿ, ದಲಿತ ನಾಯಕರ ಡಿನ್ನರ್ ಪಾರ್ಟಿಗೆ ಬ್ರೇಕ್ ಬಿದ್ದಿತ್ತು. ಆದರೆ, ಇಷ್ಟಕ್ಕೆ ಸುಮ್ಮನಾಗದ ದಲಿತ ಸಚಿವರು ಆಗಾಗ ಸಭೆ ನಡೆಸಿ, ತಮ್ಮ ಅಸಮಾಧಾನ ಹೊಹಾಕಿದ್ದರು.

ಇದೀಗ ದಲಿತ ನಾಯಕರೆಲ್ಲ ಸೇರಿ ದೆಹಲಿ ದಂಡಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ನಾಲ್ಕು ದಿನದ ಹಿಂದೆ ವಿಧಾನಸೌಧದಲ್ಲಿ ದಲಿತ ಸಚಿವರೆಲ್ಲ ಸಭೆ ಸೇರಿದ್ದರು. ವಾಲ್ಮಿಕಿ ಶ್ರೀಗಳು ಇದರ ನೇತೃತ್ವ ವಹಿಸಿದ್ದರು.

ಇದರ ಮುಂದುವರಿದ ಭಾಗ ಎಂಬAತೆ ದೆಹಲಿಗೆ ದಲಿತ ಸಚಿವರ ದಂಡು ಹೊರಟಿದೆ. ಹೈಕಮಾಂಡ್ ಭೇಟಿಯಾಗಲು ಸಿದ್ಧತೆ ನಡೆಸಿದ್ದು, ದಲಿತ ನಾಯಕರ ಡಿನ್ನರ್ ಪಾರ್ಟಿಗೆ ತಡೆಹೊಡ್ಡಿದ್ದು ಸೇರಿ ಅನೇಕ ವಿಷಯಗಳು ಚರ್ಚೆಗೆ ಬರಲಿವೆ ಎಂದು ಹೇಳಲಾಗುತ್ತಿದೆ.

ಈ ನಡುವೆ ದಂಡಯಾತ್ರೆಯ ಹಿಂದಿರುವ ಅಜೆಂಡಾ ಏನು ಎಂಬುದು ಕುತೂಹಲ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವುದೇ ಆದರೆ, ದಲಿತರಿಗೆ ಅವಕಾಶ ಸಿಗಲೇಬೇಕು. ಅದು ಸತೀಶ್ ಜಾರಕಿಹೊಳಿಯಾಗಲೀ, ಡಾ. ಜಿ. ಪರಮೇಶ್ವರ್ ಆಗಲೀ, ಎಲ್ಲರೂ ಒಟ್ಟಾಗಿ ಹೈಕಮಾಂಡ್ ಮೇಲೆ ಒತ್ತಡ ತರಬೇಕು ಎಂಬುದು ದಲಿತ ನಾಯಕರ ಒಕ್ಕೋರಲಿನ ಅಭಿಪ್ರಾಯ ಎನ್ನಲಾಗುತ್ತಿದೆ.

ಹೈಕಮಾಂಡ್ ಮುಂದೆ ಪಕ್ಷಕ್ಕಾಗಿ ದಲಿತರ, ದಲಿತ ನಾಯಕರ ತ್ಯಾಗ ಎಂತಹದ್ದು ಎಂಬುದನ್ನು ಮನವರಿಕೆ ಮಾಡಿಕೊಡುವುದು, ಎಷ್ಟು ಬಾರಿ ದಲಿತ ನಾಯಕರಿಗೆ ಸಿಎಂ ಆಗುವ ಅವಕಾಶವಿದ್ದರೂ ಮೋಸವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವುದು ದೆಹಲಿ ಯಾತ್ರೆಯ ಭಾಗವಾಗಿರಲಿದೆ.

ದಲಿತ ಸಿಎಂ ಆಗುವ ಅವಕಾಶವಿದ್ದ ಕೆ.ಎಚ್.ರಂಗನಾಥ್, ರಾಚಯ್ಯ, ಬಸವಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ಯಾರ ರೀತಿಯಲ್ಲಿ ತಪ್ಪಿತು, ಪರಮೇಶ್ವರ್ ಸಿಎಂ ಆಗುವ ಅವಕಾಶ ಕೈತಪ್ಪಿದ್ದೇಗೆ ಎಂಬೆಲ್ಲ ವಿಚಾರಗಳನ್ನು ಹೈಕಮಾಂಡ್ ಮುಂದೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ದಲಿತ ನಾಯಕರು ದೆಹಲಿಯಲ್ಲಿ ಮಾಡಲಿದ್ದಾರೆ.

ಉಳಿದ ಅವಧಿಗೆ ದಲಿತ ಸಿಎಂ ಮಾಡುವುದರಿಂದ ಪಕ್ಷಕ್ಕೆ ಆಗುವ ಲಾಭದ ಬಗ್ಗೆಯೂ ಹೈಕಮಾಂಡ್ ನಾಯಕರಿಗೆ ದಲಿತ ನಾಯಕರು ಮನವರಿಕೆ ಮಾಡಿಕೊಡಲಿದ್ದಾರೆ. ಒಂದು ವೇಳೆ ದಲಿತರನ್ನು ಕಡೆಗಣಿಸಿ, ಪ್ರಬಲ ಸಮುದಾಯಕ್ಕೆ ಮತ್ತೊಮ್ಮೆ ಮಣೆ ಹಾಕುವುದಾದರೆ ಆಗುವ ಅಪಾಯಗಳ ಬಗ್ಗೆಯೂ ಎಚ್ಚರಿಕೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


Share It

You cannot copy content of this page