ಹೈದರಾಬಾದ್: ಬೀದರ್‌ನಲ್ಲಿ ಹಾಡುಹಗಲೇ ಶೂಟೌಟ್ ನಡೆಸಿ, ಬ್ಯಾಂಕ್ ಎಟಿಎಂಗೆ ತುಂಬುವ ಹಣ ದೋಚಿದ್ದ ಆರೋಪಿಗಳು ಹೈದರಾಬಾದ್‌ನಲ್ಲೂ ಇದೇ ತರಹದ ಶೂಟೌಟ್ ಮಾಡಿ ಪರಾರಿಯಾಗಿದ್ದಾರೆ.
ಬೀದರ್‌ನಲ್ಲಿ ಇಬ್ಬರು ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ, ಓರ್ವ ಸಿಬ್ಬಂದಿಯ ಸಾವಿಗೆ ಕಾರಣವಾಗಿದ್ದ ಆರೋಪಿಗಳು ಅಲ್ಲಿಂದ ಬೈಕ್‌ನಲ್ಲಿಯೇ ಹೈದರಾಬಾದ್‌ಗೆ ತೆರಳಿದ್ದರು. ಹೈದರಾಬಾದ್‌ನಲ್ಲಿ ಖಾಸಗಿ ಬಸ್ ಮೂಲಕ ರಾಯಪುರಕ್ಕೆ ತೆರಳು ಹೊಂಚು ಹಾಕಿದ್ದರು.
ಖಾಸಗಿ ಟ್ರಾವೆಲ್ಸ್ ಬಸ್‌ನಲ್ಲಿ ರಾಯಪುರಕ್ಕೆ ಅಮಿತ್ ಕುಮಾರ್ ಹೆಸರಿನಲ್ಲಿ ಆರೋಪಿಗಳು ಟಿಕೆಟ್ ಬುಕ್ ಮಾಡಿದ್ದರು. ಮಾಹಿತಿಯ ಬೆನ್ನುಹತ್ತಿದ ಬೀದರ್ ಪೊಲೀಸರು ಕೂಡ ಅದೇ ಬಸ್‌ನಲ್ಲಿ ಟಿಕೆಟ್ ಬುಕ್ ಮಾಡಿ, ಬೀದರ್‌ನಿಂದ ಹೈದರಾಬಾದ್‌ಗೆ ಆರೋಪಿಗಳ ಬೆನ್ನುಹತ್ತಿದ್ದರು.
ಆರೋಪಿಗಳು ಹಣದ ಸಮೇತ ಬಸ್‌ನಲ್ಲಿ ಕುಳಿತಿದ್ದು, ಈ ವೇಳೆ ತಪಾಸಣೆಗೆ ಬಂದಿದ್ದ ಬಸ್ ಕಂಪನಿಯ ಮ್ಯಾನೇಜರ್, ಬ್ಯಾಗ್ ಚೆಕ್ ಮಾಡಲು ಮುಂದಾಗಿದ್ದರು. ಬ್ಯಾಗ್ ಚೆಕ್ ಮಾಡಲು ನೀವ್ಯಾರು ಎಂದು ಪ್ರಶ್ನೆ ಮಾಡಿದ್ದಕ್ಕೆ, ಈಗಾಗಲೇ ಮಾಹಿತಿಯಿದ್ದ ಕಾರಣಕ್ಕೆ ಮ್ಯಾನೇಜರ್ ಜಹಂಗೀರ್ ನಾನು ಬೀದರ್ ಪೊಲೀಸ್ ಎಂದು ಹೇಳಿದ್ದರು.
ಬೀದರ್ ಪೊಲೀಸ್ ಎನ್ನುತ್ತಿದ್ದಂತೆ ಮ್ಯಾಜೇನರ್ ಜಹಾಂಗೀರ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳು ಅಲ್ಲಿಂದ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದಾರೆ. ಅವರ ಬೆನ್ನಟ್ಟಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಆಂಧ್ರಪ್ರದೇಶದಲ್ಲಿ ಬಲೆ ಬೀಸಿದ್ದಾರೆ.