ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ಗಳ ಹಾವಳಿಯ ತಡೆಗೆ ರಾಜ್ಯ ಸರಕಾರ ಮುಂದಾಗಿದ್ದು, ಕಂದಾಯ ಸಚಿವರು ಮತ್ತು ಕಾನೂನು ಸಚಿವರ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಸಾಲ ನೀಡುವ ಮೂಲಕ ಬಡವರನ್ನ ಸಾಲದ ಸುಳಿಗೆ ಸಿಲುಕಿಸುತ್ತಿರುವ ಹುನ್ನಾರ ತಡೆಯಲು ಆನ್ಲೈನ್ ಪೋರ್ಟಲ್ ಮಾಡಿ ಯಾರಿಗೆ ಎಷ್ಟು ಸಾಲ ನೀಡಲಾಗಿದೆ ಎಂದು ಅಪ್ಡೇಟ್ ಮಾಡಬೇಕು. ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಹಾಗೂ ಸಾಲ ನೀಡುವ ಸಂಪೂರ್ಣ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯಬೇಕ ಎಂದು ತಾಕೀತು ಮಾಡಲಾಗಿದೆ.
ಸಾಲಕ್ಕೆ ವಿಧಿಸುವ ಬಡ್ಡಿ ದರದ ಪ್ರಮಾಣ ಪಾರದರ್ಶಕ ಹಾಗೂ ಆರ್‌ಬಿಐ ನೀತಿಗೆ ಅನುಗುಣವಾಗಿರಬೇಕು. ಮೈಕ್ರೋ ಫೈನಾನ್ಸ್ ಕಂಪೆನಿಗಳು ಕಡ್ಡಾಯವಾಗಿ ರಾಜ್ಯದಲ್ಲಿ ನೋಂದಣಿಯಾಗಿರಬೇಕು. ಯಾವುದೇ ಸಂದರ್ಭದಲ್ಲಿ ಈ ನೋಂದಣಿಯನ್ನ ಸರ್ಕಾರ ತಿರಸ್ಕರಿಸಬದುದು ಎಂದು ಸರಕಾರ ನಿಬಂಧನೆ ವಿಧಿಸಿದೆ.
ಮೈಕ್ರೋ ಫೈನಾನ್ಸ್ ಕಂಪೆನಿಗಳ ವ್ಯವಹಾರವನ್ನ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿ ಎಡಿಸಿ ಮತ್ತು ಎಸಿಗಳನ್ನು ಒಳಗೊಂಡ ಒಂಬುಡ್ಸ್ಮನ್ ನೇಮಕ ಮಾಡಬೇಕು. ಈ ಕಂಪೆನಿಗಳು ಸಾಲದ ಹೆಸರಲ್ಲಿ ಬಡ ಜನರಿಂದ ಯಾವ ವಸ್ತುಗಳು-ಆಸ್ತಿಗಳನ್ನ ಅಡಮಾನ ಇಡಿಸಿಕೊಳ್ಳುವಂತಿಲ್ಲ ಎಂಬುದು ನೀತಿಯ ಬಹುಮುಖ್ಯ ಭಾಗವಾಗಿರಲಿದೆ.
ಸಾಲ ಮರುಪಾವತಿ ಮಾಡದವರ ವಿರುದ್ಧ ಮಧ್ಯವರ್ತಿಗಳ ಮೂಲಕ ದಬ್ಬಾಳಿಕೆ ಮಾಡುವಂತಿಲ್ಲ ಎಂಬುದೂ ಸೇರಿ ಹಲವು ಪ್ರಮುಖ ವಿಚಾರಗಳನ್ನು ಕಾನೂನಿನ ಚೌಕಟ್ಟಿನೊಳಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಅಂಶದ ಆಧಾರದ ಮೇಲೆಯೇ ಕಾನೂನು ರಚನೆಯಾಗಲಿದೆ.