ಚಾಮರಾಜನಗರ: ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ ದೊರೆಯುವ 15 ಲಕ್ಷ ಪರಿಹಾರ ಲಪಟಾಯಿಸಲು ಸಂಚು ರೂಪಿಸಿದ ಪತ್ನಿ, ಪತಿಯನ್ನ ಹತ್ಯೆಗೈದು ಹುಲಿ ಕೊಂದಿರುವ ಕಥೆ ಕಟ್ಟಿ ಪೊಲೀಸರನ್ನು ಯಾಮಾರಿಸಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಸಲ್ಲಾಪುರಿ ಪತ್ನಿಯನ್ನೇ (40) ಹತ್ಯೆಗೈದು ಕಥೆ ಕಟ್ಟಿ ಸಿಕ್ಕಿಬಿದ್ದ ಕಿಲಾಡಿ ಪತ್ನಿ. ಪತ್ನಿಯ ಕುತಂತ್ರಕ್ಕೆ ಕೊಲೆಯಾದ ದುರ್ದೈವಿ ಪತಿ ವೆಂಕಟಸ್ವಾಮಿ. ಇವರು ಮೂಲತಃ ಮಳವಳ್ಳಿ ತಾಲೂಕು ಕದಂಪುರ ಗ್ರಾಮದವರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ಚಿಕ್ಕಹೆದ್ದೂರಿನ ಹಾಡಿಯಲ್ಲಿ ಬೆಂಗಳೂರಿನ ಆರುಣ್, ರವಿ ಮತ್ತಿಬ್ಬರು ಸ್ನೇಹಿತರು 4-10 ಗುಂಟೆ ಜಮೀನು ಖರೀದಿಸಿದ್ದರು. ಈ ಜಮೀನನ್ನು ನೋಡಿಕೊಳ್ಳಲು ಈ ದಂಪತಿಗಳನ್ನು ನೇಮಿಸಿದ್ದರು. ಐಷಾರಾಮಿ ಜೀವನದ ಕನಸು ಕಾಣುತ್ತಿದ್ದ ಈಕೆ. ಸರ್ಕಾರದ ಯೋಜನೆಗಳಲ್ಲಿ ಹಣ ಪಡೆಯುವ ಉದ್ದೇಶ ಇಟ್ಟುಕೊಂಡು ಆಗಾಗ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಳು.
ಈ ವೇಳೆ ಕಾಡುಪ್ರಾಣಿಗಳ ದಾಳಿಯಲ್ಲಿ ಮೃತಪಟ್ಟರೆ 15 ಲಕ್ಷ ಪರಿಹಾರ ದೊರೆಯವ ಯೋಜನೆ ಮಾಹಿತಿ ಈಕೆಗೆ ದೊರೆತಿದೆ. ಪತಿಯನ್ನು ಕೊಲೆಗೈಯ್ಯುವ ಸ್ಕೆಚ್ ತಯಾರಿಸಿದ ಸಲ್ಲಾಪುರಿ ಕಳೆದ ಮಂಗಳವಾರ ವಿಷ ಹಾಕಿ ಕೊಂದಿದ್ದಾಳೆ. ನಂತರ ಮನೆಯಿಂದ ಮೃತದೇಹ ಹೊರಕ್ಕೆ ಎಳೆದೊಯ್ದು ವಿರೂಪಗೊಳಿಸಿ ಗುಂಡಿಯಲ್ಲಿ ಮುಚ್ಚಿಹಾಕಿ ಕಾಡು ಪ್ರಾಣಿ ದಾಳಿಯಿಂದ ಮೃತಪಟ್ಟಂತೆ ಬಿಂಬಿಸಿದ್ದಾಳೆ.
ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಾಕೆ ಪೊಲೀಸರ ಅತಿಥಿ: ಸಲ್ಲಾಪುರಿ ಠಾಣೆಯಲ್ಲಿ ಪತಿ ನಾಪತ್ತೆಯಾದ ಬಗ್ಗೆ ಮಿಸ್ಲಿಂಗ್ ಕಂಪ್ಲೇಂಟ್ ಕೊಟ್ಟಿದ್ದಾಳೆ. ದೂರಿನಲ್ಲಿ ಹುಲಿ ಎಳೆದೊಯ್ದಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾಳೆ. ಸಲ್ಮಾಪುರಿ ಮಾತನ್ನ ನಂಬಿದ ಪೊಲೀಸರು. ಸ್ಥಳಕ್ಕೆ ಹೋಗಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನೆರವಿನಿಂದ ಹುಡುಕಾಟ ನಡೆಸಿದ್ದಾರೆ. ಆದರೆ, ಅಲ್ಲಿ ಹುಲಿ ದಾಳಿ ನಡೆಸಿದ ಯಾವುದೇ ಕುರುಹು ಸಿಕ್ಕಿಲ್ಲ, ಮಳೆ ಸುರಿದ ಕಾರಣ ಕುರುಹು ನಾಶವಾಗಿರಬಹುವೆಂದು ಪೊಲೀಸರು ಊಹಿಸಿದ್ದಾರೆ.
ಆದರೆ, ಸಿಸಿ ಕ್ಯಾಮರಾದಲ್ಲಿ ಪತ್ನಿಸಲ್ಲಾಪುರಿ ಮಾತ್ರ ಓಡಾಡಿರುವುದು ಕಂಡುಬಂದಿದೆ. ಇನ್‌ಸ್ಪೆಕ್ಟರ್ ಮುನಿಯಪ್ಪ ಅವರು ಸಲ್ಲಾಪುರಿಯನ್ನು ತೀರ್ವ ವಿಚಾರಣೆಗೆ ಒಳಪಡಿಸಿದಾಗ ವಿಷ ಕೊಟ್ಟು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ ಸರ್ಕಾರದಿಂದ ಸಿಗುವ 15 ಲಕ್ಷ ಪರಿಹಾರ ಹಣ ಪಡೆಯುವ ಹುನ್ನಾರದಿಂದ ಕೃತ್ಯ ನಡೆಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಮಲ್ಲಿಕ್ ಹಾಗೂ ಡಿವೈಎಸ್ಪಿ ಗೋಪಾಲ ಕೃಷ್ಣ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಮುನಿಯಪ್ಪ, ರಾಧಾ, ಮಂಜು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.