ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಭಾರತದ ಜಯ್ ಶಾ ಆಯ್ಕೆಯಾಗಿದ್ದಾರೆ.
ಈ ಹಿಂದೆ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಜಯ್ ಶಾ ಈ ಬಾರಿಯ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಅವರಿಗೆ ಪ್ರತಿಸ್ಫರ್ಧಿಯಾಗಿ ಯಾರೂ ಸಹ ನಾಮಪತ್ರ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು (ಆಗಸ್ಟ್ 27) ಅಧಿಕೃತವಾಗಿ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದು, 2024ರ ಡಿಸೆಂಬರ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಹಾಲಿ ಐಸಿಸಿ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ ಅವರ ಕಾರ್ಯಾವಧಿ ನವೆಂಬರ್ 30 ಕ್ಕೆ ಮುಗಿಯಲಿದ್ದು, ಇದಾದ ಬಳಿಕ ಜಯ್ ಶಾ ವಿಶ್ವ ಕ್ರಿಕೆಟ್ ಮಂಡಳಿಯ ಗದ್ದುಗೆ ಏರಲಿದ್ದಾರೆ. ಅದರಂತೆ ಡಿಸೆಂಬರ್ 1 ರಿಂದ ಜಯ್ ಶಾ ಕಾರ್ಯಾರಂಭ ಮಾಡಲಿದ್ದಾರೆ.
ಇದಕ್ಕೂ ಮುನ್ನ ಗ್ರೆಗ್ ಬಾರ್ಕ್ಲೇ ಅವರು 2020 ರಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ 2022ರಲ್ಲಿ ಅವರು ಮರು ಚುನಾಯಿತರಾಗಿದ್ದರು. ಇದೀಗ ಅವರ ಕಾರ್ಯಾವಧಿ ಮುಗಿಯುತ್ತಿದ್ದು, ಹೀಗಾಗಿ ಈ ಬಾರಿ ಚುನಾವಣೆ ಘೋಷಿಸಲಾಗಿತ್ತು. ಆದರೀಗ ಅಧ್ಯಕ್ಷ ಹುದ್ದೆಗೆ ಜಯ್ ಶಾ ಅವರ ಹೆಸರು ಮಾತ್ರ ನಾಮನಿರ್ದೇಶನಗೊಂಡಿದ್ದು, ಅದರಂತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅತ್ಯಂತ ಕಿರಿಯ ಅಧ್ಯಕ್ಷ:
35 ವರ್ಷದ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರುತ್ತಿದ್ದಂತೆ, ಐಸಿಸಿ ಮುಖ್ಯಸ್ಥರಾದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಹುದ್ದೆಯನ್ನು ಅಲಂಕರಿಸಿದ 5ನೇ ಭಾರತೀಯ ಎಂಬ ಹೆಗ್ಗಳಿಕೆಗೂ ಜಯ್ ಶಾ ಪಾತ್ರರಾಗಿದ್ದಾರೆ.
ಐಸಿಸಿ ಅಧ್ಯಕ್ಷರಾದ ಭಾರತೀಯರು:
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಈವರೆಗೆ ನಾಲ್ವರು ಭಾರತೀಯರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್. ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್. ಇದೀಗ ಈ ಹುದ್ದೆಗೇರಿದ 5ನೇ ಭಾರತೀಯನಾಗಿ ಜಯ್ ಶಾ ಹೊರಹೊಮ್ಮಿದ್ದಾರೆ. ಅದು ಸಹ ತಮ್ಮ 35ನೇ ವಯಸ್ಸಿನಲ್ಲಿ ಎಂಬುದು ವಿಶೇಷ.
ಬಿಸಿಸಿಐನ ಯಶಸ್ವಿ ಕಾರ್ಯದರ್ಶಿ:
ಜಯ್ ಶಾ 2019 ರಿಂದ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಷ್ಟೇ ಅಲ್ಲದೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೇರುವ ಮುನ್ನ ದೇಶೀಯ ಕ್ರಿಕೆಟ್ ಆಡುವ ಭಾರತೀಯ ಆಟಗಾರರಿಗೆ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳೊಂದಿಗೆ ಬಹುಮಾನ ಮೊತ್ತ ನೀಡುವ ಪ್ರಮುಖ ನಿರ್ಧಾರವನ್ನು ಜಯ್ ಶಾ ಕೈಗೊಂಡಿದ್ದರು. ಇಂತಹ ಮಹತ್ವದ ನಿರ್ಧಾರಗಳೊಂದಿಗೆ ಭಾರತೀಯ ಕ್ರಿಕೆಟ್ನ ಉತ್ತೇಜನಕ್ಕೆ ಕಾರಣರಾಗಿರುವ ಜಯ್ ಶಾ ಅವರು ಇದೀಗ ಐಸಿಸಿ ಮುಖ್ಯಸ್ಥ ಸ್ಥಾನಕ್ಕೇರಿರುವುದರಿಂದ ಅವರ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ.