ಹುಲುನ್‌ಬಿಯುರ್ (ಚೀನ): ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿದ ಭಾರತ, ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ.
ಬುಧವಾರದ ಪಂದ್ಯದಲ್ಲಿ ಭಾರತ 8-1 ಭರ್ಜರಿ ಅಂತರದಿಂದ ಮಲೇಷ್ಯಾವನ್ನು ಮಣಿಸಿತು.
ಯುವ ಸ್ಟ್ರೈಕರ್ ರಾಜ್‌ಕುಮಾರ್ ಹ್ಯಾಟ್ರಿಕ್ ಗೋಲುಗಳ ಮೂಲಕ ಮಿಂಚಿದರು. ಅವರು 3ನೇ, 25ನೇ ಮತ್ತು 33ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಉಳಿದ ಗೋಲು ವೀರರೆಂದರೆ ಅರೈಜೀತ್ ಸಿಂಗ್ ಹುಂಡಾಲ್ (6ನೇ, 39ನೇ ನಿಮಿಷ), ಜುಗ್ರಾಜ್ ಸಿಂಗ್ (7ನೇ ನಿಮಿಷ), ನಾಯಕ ಹರ್ಮನ್‌ಪ್ರೀತ್ ಸಿಂಗ್ (22ನೇ ನಿಮಿಷ) ಮತ್ತು ಉತ್ತಮ್ ಸಿಂಗ್ (40ನೇ ನಿಮಿಷ). ಮಲೇಷ್ಯಾದ ಏಕೈಕ ಗೋಲನ್ನು 34ನೇ ನಿಮಿಷದಲ್ಲಿ ಅಖೀಮುಲ್ಲಾ ಅನ್ವರ್ ಹೊಡೆದರು.
ಭಾರತ ಕಳೆದ ಏಷ್ಯನ್ ಚಾಂಪಿ ಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲೂ ಮಲೇಷ್ಯಾವನ್ನು ಮಣಿಸಿತ್ತು. ಅಲ್ಲಿ ವಿರಾಮದ ವೇಳೆ 1-3ರ ಹಿನ್ನಡೆಯಲ್ಲಿದ್ದ ಭಾರತ, ಬಳಿಕ 4-3 ಅಂತರದಿಂದ ಗೆದ್ದು ಬಂದಿತ್ತು.
ಅಗ್ರಸ್ಥಾನದಲ್ಲಿ ಭಾರತ: ಮೂರೂ ಪಂದ್ಯಗಳನ್ನು ಗೆದ್ದಿರುವ ಭಾರತವೀಗ 9 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಇದಕ್ಕೂ ಮುನ್ನ ಚೀನ ವಿರುದ್ಧ 3-0 ಹಾಗೂ ಜಪಾನ್ ವಿರುದ್ಧ 5-1 ಅಂತರದ ಜಯ ಸಾಧಿಸಿತ್ತು. ಇದು 6 ತಂಡಗಳ ನಡುವಿನ ರೌಂಡ್ ರಾಬಿನ್ ಲೀಗ್ ಮಾದರಿಯ ಪಂದ್ಯಾವಳಿಯಾಗಿದ್ದು, ಹಾಲಿ ಚಾಂಪಿಯನ್ ಭಾರತವಿನ್ನು ಗುರುವಾರ ಕೊರಿಯಾ ವಿರುದ್ಧ ಹಾಗೂ ಶನಿವಾರ ಪಾಕಿಸ್ಥಾನ ವಿರುದ್ಧ ಸೆಣಸಲಿದೆ.