ಅಪರಾಧ ರಾಜಕೀಯ ಸುದ್ದಿ

ಗಣಿ ಗುತ್ತಿಗೆ ಮಂಜೂರಾತಿಗೆ ಲಂಚ ಆರೋಪ: ಎಚ್.ಡಿ.ಕೆ ವಿರುದ್ಧ ದೋಷಾರೋಪಣೆ ಸಲ್ಲಿಸಲು ರಾಜ್ಯಪಾಲರಿಗೆ ಪತ್ರ ಬರೆದ SIT

Share It

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಮುಡಾ ಸೈಟ್ ಹಗರಣ ಪ್ರಕರಣದ ತನಿಖೆಗಾಗಿ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ಅನುಮತಿ ನೀಡಿದ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ​ ಕುಮಾರಸ್ವಾಮಿ ಅವರಿಗೆ ಸಂಕಷ್ಟ ಎದುರಾಗಿದೆ.

ಹಿಂದೆ 2007 ರಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ದಾಗ ಎಚ್.ಡಿ.ಕುಮಾರಸ್ವಾಮಿ ಅವರು ನಿಯಮ ಉಲ್ಲಂಘಿಸಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್​​ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದರು ಎಂಬ ಆರೋಪವಿತ್ತು. ಇದೀಗ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿ ಎಸ್​ಐಟಿ ರಾಜ್ಯಪಾಲರಿಗೆ ಪತ್ರ ಬರೆದಿದೆ.

ಹೆಚ್​.ಡಿ ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗಣಿ ಮತ್ತು ಖನಿಜ ನಿಯಮಗಳನ್ನು ಉಲ್ಲಂಘಿಸಿ ಎಸ್​ಎಸ್​ವಿಎಂ ಕಂಪನಿಗೆ 550 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪವಿತ್ತು. 2011ರಲ್ಲಿ ಲೋಕಾಯುಕ್ತರಾಗಿದ್ದ ಎನ್​. ಸಂತೋಷ್​ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿದ್ದ ವರದಿ ಉಲ್ಲೇಖ ಆಧರಿಸಿ ಎಸ್​ಐಟಿ ತನಿಖೆ ನಡೆಸುತ್ತಿದೆ.

ಸದ್ಯ ಈಗ ಕೇಂದ್ರ ಸಚಿವರಾಗಿರುವ ಹೆಚ್​.ಡಿ ಕುಮಾರಸ್ವಾಮಿ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಭಾರತೀಯ ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ ಗಣಿ ಮತ್ತು ಖನಿಜ ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಎಸ್​ಐಟಿ ಕಳೆದ 2023ರ ನವೆಂಬರ್ 21ರಂದು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರಿಗೆ ಪ್ರಸ್ತಾವನೆ ಸಲ್ಲಿಸಿತ್ತು.

ಹೆಚ್​ಡಿ ಕುಮಾರಸ್ವಾಮಿ ಅವರ ವಿರುದ್ಧ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಳನ್ನು ನೀಡುವಂತೆ ರಾಜ್ಯಪಾಲರು ಜುಲೈ 29 ರಂದು ಎಸ್​ಐಟಿಗೆ ಪತ್ರ ಬರೆದರು.

ರಾಜ್ಯಪಾಲರು ಕೋರಿದ್ದ ಸ್ಪಷ್ಟನೆಗಳಿಗೆ ಉತ್ತರಗಳೊಂದಿಗೆ ಎಸ್​ಐಟಿ ಸೋಮವಾರ ಸಂಜೆ ರಾಜ್ಯಪಾಲರಿಗೆ ಪತ್ರ ಬರೆಯಿತು. ಜೊತೆಗೆ ಹೆಚ್​ಡಿ ಕುಮಾರಸ್ವಾಮಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಇದೀಗ ಎಸ್ಐಟಿ ರಾಜ್ಯಪಾಲರಿಗೆ ಮತ್ತೆ ಮನವಿ ಮಾಡಿದೆ.

ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಸೇರಿಗೆ ಸವ್ವಾ ಸೇರು ರಾಜಕಾರಣಕ್ಕೆ ಪರೋಕ್ಷವಾಗಿ ಎಸ್ಐಟಿ ಮೂಲಕ ಹವಣಿಸಿದ್ದಾರೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕಿಡಿಕಾರಿವೆ.

ಇಷ್ಟು ವರ್ಷಗಳ ಕಾಲ ಏಕೆ ಸಿದ್ದರಾಮಯ್ಯ ಅವರು ಸುಮ್ಮನಿದ್ದು, ಇದೀಗ ತಮ ಮುಡಾ ಸೈಟ್ ಹಗರಣ ಬಯಲಿಗೆ ಬೀಳುತ್ತಾ ಸಿಎಂ ಸ್ಥಾನ ಹೋಗೇಬಿಡ್ತು ಎನ್ನುವ ಸಮಯದಲ್ಲಿ ದಿಢೀರನೆ ಎಚ್. ಡಿ.ಕೆ ವಿರುದ್ಧ ಸೇಡಿನ‌ ರಾಜಕಾರಣ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.


Share It

You cannot copy content of this page