ಬೆಂಗಳೂರು: ಇಬ್ಬರು ಹೆಣ್ಣುಮಕ್ಕಳನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಮಲತಂದೆಯನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಅಮೃತಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಅಪ್ರಾಪ್ತ ಬಾಲಕಿಯರ ಕೊಲೆಗೆ ಸಂಬಂಧಿಸಿದಂತೆ, ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಮೃತಹಳ್ಳಿಯ ಕಾವೇರಿಪುರ ಬಡಾವಣೆಯಲ್ಲಿ ವಾಸವಾಗಿದ್ದ ಮಹಿಳೆಯ ಜತೆ ಸಂಬಂಧ ಹೊಂದಿದ್ದ ವ್ಯಕ್ತಿ ಅಮಿತ್, ಇಬ್ಬರು ಹೆಣ್ಣುಮಕ್ಕಳನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದ. ಪ್ರಕರಣದ ಸಂಬಂಧ ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಹುಡುಕಾಟ ನಡೆಸಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ರೈಲಿನಲ್ಲಿ ಪರಾರಿಯಾಗಲು ಹಂತಕ ಯತ್ನಿಸುತ್ತಿದ್ದ. ಆದರೆ, ಟಿಕೆಟ್ ಪಡೆಯಲು ತನ್ನ ಮೊಬೈಲ್ ಸಂಖ್ಯೆ ಅಗತ್ಯವಾಗಿ ಬೇಕಾದಾಗ ಅದನ್ನು ಕೆಲವು ಸೆಕೆಂಡ್ ಗಳ ಕಾಲ ಸ್ವಿಚ್ ಆನ್ ಮಾಡಿದ್ದ.
ಆತನ ಪೋನ್ ಆನ್ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಹಂತಕ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿರುವುದನ್ನು ಪತ್ತೆ ಹಚ್ಚಿ ಕ್ಷಣಮಾತ್ರದಲ್ಲಿ ಆತನನ್ನು ಸುತ್ತುವರಿದಿದ್ದಾರೆ. ಹೀಗಾಗಿ, ಬೆಳಗ್ಗೆಯೇ ಪರಾರಿಯಾಗಿ ಉತ್ತರಭಾರತದ ಕಡೆಗೆ ಹೊರಟಿದ್ದ ಹಂತಕ ಪೊಲೀಸರ ಅತಿಥಿಯಾಗಿದ್ದಾನೆ.
ಏನಿದು ಘಟನೆಯ ವಿವರ? ಅಸ್ಸಾಂ ಮೂಲದ ಸುಮಿತ್ ಇಬ್ಬರು ಮಕ್ಕಳಿರುವ ತಾಯಿಯ ಜತೆ ಕಾವೇರಿ ಪುರ ಬಡಾವಣೆಯಲ್ಲಿ ವಾಸವಿದ್ದ. ಆಕೆಯ ಮೊದಲ ಪತ್ನಿಯ ಮಕ್ಕಳಾದ ಕಾರಣ ಅವರ ಜತೆಗೆ ಆಗಾಗ ಕಿರಿಕ್ ಆಗುತ್ತಿತ್ತು. ಈ ಸಿಟ್ಟಿನಲ್ಲಿ ತಾಯಿ ಕೆಲಸಕ್ಕೆ ಹೋದಾಗ ಮನೆಗೆ ನುಗ್ಗಿದ ಸುಮಿತ್ ಮಾರಕಾಸ್ತ್ರಗಳಿಂದ ಇಬ್ಬರು ಹೆಣ್ಣುಮಕ್ಕಳನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ತಾಯಿ ದೂರು ನೀಡಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.