ಪಿಜಿಗೆ ನುಗ್ಗಿ ಯುವತಿಯ ಕೊಲೆ ಮಾಡಿದ್ದ ಆರೋಪಿ ವಿರುದ್ಧ 1205 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು
ಬೆಂಗಳೂರು: ಕೋರಮಂಗಲದ ಪಿಜಿಯೊಂದರಲ್ಲಿ ನುಗ್ಗಿ ಯುವತಿಯ ಕತ್ತು ಸೀಳಿ ಹತ್ಯೆಗೈದಿದ್ದ ಪ್ರಕರಣದ ಆರೋಪಿ ವಿರುದ್ಧ ಕೋರಮಂಗಲ ಠಾಣೆ ಪೊಲೀಸರು ನ್ಯಾಯಾಲಯಕ್ಕೆ 1205 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಯುವತಿ ಕೊಲೆ ಪ್ರಕರಣ ಸಂಬಂಧ ಆರೋಪಿ ವಿರುದ್ಧ 85 ಸಾಕ್ಷಿಗಳನ್ನು ಸಂಗ್ರಹಿಸಿರುವ ಪೊಲೀಸರು, ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಜುಲೈ 23ರಂದು ರಾತ್ರಿ ಕೋರಮಂಗಲದ 6ನೇ ಬ್ಲಾಕ್ ವಿ.ಆರ್. ಲೇಔಟ್ ಪಿಜಿಯಲ್ಲಿ ಬಿಹಾರ ಮೂಲದ ಕೃತಿ ಕುಮಾರಿ (24) ಎಂಬ ಯುವತಿಯ ಹತ್ಯೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕೋರಮಂಗಲ ಠಾಣಾ ಪೊಲೀಸರು ಮಧ್ಯಪ್ರದೇಶದ ಬೇಗಂ ಗಂಜ್ ಮೂಲದ ಅಭಿಷೇಕ್ ಘೋಸಿ (23)ಯನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿಚಾರಣೆ ಕೈಗೊಂಡು, ಬರೋಬ್ಬರಿ 1205 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಕೃತಿ ಕುಮಾರಿಯ ಸಹೋದ್ಯೋಗಿಯನ್ನು ಆರೋಪಿ ಪ್ರೀತಿಸುತ್ತಿದ್ದ. ಯಾವುದೇ ಉದ್ಯೋಗ ಮಾಡದೆ ಖಾಲಿಯಿರುತ್ತಿದ್ದ ಅಭಿಷೇಕ್, ಆಗಾಗ ಬೆಂಗಳೂರಿಗೆ ಬಂದು ತನ್ನ ಪ್ರೇಯಸಿಯನ್ನ ಭೇಟಿಯಾಗಿ ಹೋಗುತ್ತಿದ್ದ. ನಿರುದ್ಯೋಗಿಯಾಗಿ ಸುತ್ತಾಡದೆ ಯಾವುದಾದರೂ ಕೆಲಸ ಮಾಡುವಂತೆ ಅಭಿಷೇಕ್‌ಗೆ ಆತನ ಪ್ರೇಯಸಿ ಬುದ್ಧಿವಾದ ಹೇಳುತ್ತಿದ್ದುದರಿಂದ ಆಗಾಗ ಇಬ್ಬರ ನಡುವೆಯೂ ಜಗಳ ನಡೆಯುತ್ತಿತ್ತು.
ಅಭಿಷೇಕ್ ಆಗಾಗ ಪಿ.ಜಿ ಬಳಿ ಬಂದು ಗಲಾಟೆ ಮಾಡಲಾರಂಭಿಸಿದ್ದ. ಹೀಗಾಗಿ ಸ್ನೇಹಿತೆಯನ್ನ ಕೆಲ ದಿನಗಳ ಹಿಂದಷ್ಟೇ ಕೃತಿ ಕುಮಾರಿಯೇ ಬೇರೊಂದು ಪಿಜಿಗೆ ಶಿಫ್ಟ್ ಮಾಡಿಸಿದ್ದಳು. ಇದರಿಂದ ಕೃತಿ ಕುಮಾರಿ ಮೇಲೆ ಸಿಟ್ಟಾಗಿದ್ದ ಅಭಿಷೇಕ್, ಜುಲೈ 23ರಂದು ರಾತ್ರಿ 8 ಗಂಟೆ ಸುಮಾರಿಗೆ ಪಿಜಿ ಬಳಿ ಬಂದಿದ್ದ.
ಆದರೆ ಅಭಿಷೇಕ್ನನ್ನು ಅಲ್ಲಿನ ಸೆಕ್ಯುರಿಟಿ ತಡೆದಿದ್ದ. ರಾತ್ರಿ 11ರ ಸುಮಾರಿಗೆ ಮತ್ತೆ ಬಂದಿದ್ದ ಅಭಿಷೇಕ್ ನೇರವಾಗಿ 3ನೇ ಫ್ಲೋರ್‌ಗೆ ತೆರಳಿ ಕೃತಿ ಕುಮಾರಿ ರೂಮ್ ಬಾಗಿಲು ಬಡಿದಿದ್ದ. ರೂಮ್‌ನ ಬಾಗಿಲು ತೆರೆಯುತ್ತಿದ್ದಂತೆ ಆಕೆಯ ಕತ್ತು ಕೊಯ್ದು ಪರಾರಿಯಾಗಿದ್ದ ಎಂದು ವಿವರಿಸಲಾಗಿದೆ.
ಕೃತ್ಯದ ಬಳಿಕ ತನ್ನ ಊರಿಗೆ ಹೋಗಿದ್ದ ಆರೋಪಿ, ಪೋಷಕರನ್ನು ಸಂಪರ್ಕಿಸಿ ತಾನು ಯುವತಿಯೊಬ್ಬಳನ್ನು ಹತ್ಯೆಗೈದಿರುವುದಾಗಿ ತಿಳಿಸಿದ್ದ. ಮತ್ತೊಂದೆಡೆ ಆರೋಪಿ ಪೋಷಕರ ಮಾಹಿತಿ ಕಲೆಹಾಕಿ ಸಂಪರ್ಕಿಸಿದ್ದ ಪೊಲೀಸರು ಬಳಿಕ ಮಧ್ಯಪ್ರದೇಶದ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಿದ್ದರು.