ಅಪರಾಧ ಸುದ್ದಿ

ನಾಗಮಂಗಲ ಗಣೇಶ ಗಲಭೆ: ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಸಾವು

Share It

ಮಂಡ್ಯ : ಜಿಲ್ಲೆಯ ನಾಗಮಂಗಲ‌ ಗಣೇಶ ವಿಸರ್ಜನೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 52 ಆರೋಪಿಗಳ ಬಂಧನವಾಗಿದೆ.

ಬಂಧನದ ಭೀತಿಯಿಂದ ಕೆಲ ಯುವಕರು ಊರು ತೊರೆದಿದ್ದು, ಮನೆ ಮಂದಿಯೆಲ್ಲಾ ಕಣ್ಣೀರು ಹಾಕುತ್ತಿದ್ದಾರೆ. ಗಲಭೆಗೆ ಕಾರಣವಾದ ಬದ್ರಿಕೊಪ್ಪಲು ಗ್ರಾಮದ 13 ಮಂದಿ ಅರೆಸ್ಟ್ ಆಗಿದ್ದಾರೆ. ಇದೀಗ ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕನೋರ್ವ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬ್ರೈನ್ ಸ್ಟ್ರೋಕ್​ನಿಂದ ಕಿರಣ್(23) ಮೃತಪಟ್ಟಿದ್ದಾರೆ.

ನಾಗಮಂಗಲ ತಾಲೂಕಿನ ಬದ್ರಿಕೊಪ್ಪಲು ಗ್ರಾಮದ ನಿವಾಸಿ ಕಿರಣ್​ ಸೆಪ್ಟೆಂಬರ್ 11ರ ರಾತ್ರಿ ಗಲಭೆ ನಂತರ ಗ್ರಾಮ ತೊರೆದಿದ್ದ. ಆದರೆ ನಿನ್ನೆ ಕಿರಣ್​ಗೆ ಬ್ರೈನ್ ಸ್ಟ್ರೋಕ್ ಆಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕಿರಣ್ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾನೆ.

ಕಿರಣ್ ತಂದೆ ಕುಮಾರ್​ರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ನಾಗಮಂಗಲ ಗಲಭೆ ಕೇಸ್​ನಲ್ಲಿ ಕುಮಾರ್ 17ನೇ ಆರೋಪಿಯಾಗಿದ್ದಾರೆ. ಸದ್ಯ ಮಂಡ್ಯ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶವ ಸ್ಥಳಾಂತರ ಮಾಡಲಾಗಿದ್ದು, ಇದೀಗ ಕಿರಣ್ ಮೃತದೇಹ ಗ್ರಾಮಕ್ಕೆ ಆಗಮಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಂದಹಾಗೆ ಪ್ರಕರಣ ಸಂಬಂಧ ಬದ್ರಿಕೊಪ್ಪಲು ಗ್ರಾಮದ ಹಲವರ ಬಂಧನವಾಗಿದ್ದರೆ, ಮತ್ತೊಂದು ಕಡೆ 25 ಕ್ಕೂ ಹೆಚ್ಚು ಯುವಕರು ಗ್ರಾಮ ತೊರೆದಿದ್ದಾರೆ. ಹೀಗಾಗಿ ಯುವಕರ ಕುಟುಂಬಸ್ಥರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಕದಬಹಳ್ಳಿ ಗ್ರಾಮದ ರೈತರು ಗ್ರಾಮಕ್ಕೆ ಭೇಟಿ ನೀಡಿ 20ಕ್ಕೂ ಹೆಚ್ಚು ಕುಟುಂಬಗಳಿಗೆ ತಮ್ಮ ಕೈಲಾದ ಮಟ್ಟಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಬಂಧನಕ್ಕೆ ಒಳಗಾಗಿ ಮಂಡ್ಯ ಜಿಲ್ಲಾ ಕಾರಗೃಹದಲ್ಲಿರುವ ಹಿಂದೂಗಳನ್ನ ಭೇಟಿ ಮಾಡಲು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮುಂದಾಗಿದ್ದರು. ಆದರೆ ಜಿಲ್ಲೆಗೆ ಬರುವ ಮೊದಲೇ ಮಂಡ್ಯ ಜಿಲ್ಲೆಗೆ ಬರದಂತೆ ಆದೇಶವನ್ನ ಹೊರಡಿಸಿ, ಮಂಡ್ಯ ಜಿಲ್ಲೆಯ ಗಡಿ, ನಿಡಗಟ್ಟ ಬಳಿಯೇ ಪೊಲೀಸರು ತಡೆದು ಆದೇಶದ ಪ್ರತಿ ತೋರಿಸಿ ಜಿಲ್ಲಾ ಪ್ರವೇಶಕ್ಕೆ ಬ್ರೇಕ್ ಹಾಕಿದ್ದರು. ಹೀಗಾಗಿ ಸರ್ಕಾರದ ವಿರುದ್ಧ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.


Share It

You cannot copy content of this page