ಅಪರಾಧ ಸಿನಿಮಾ ಸುದ್ದಿ

ನನ್ನ ಜೊತೆಗಿದ್ದ ಹುಡುಗರಿಂದ ಹಾಳಾದೆ: ಪೊಲೀಸರಿಗೆ ದರ್ಶನ್ ಮೊದಲ ಹೇಳಿಕೆ!

Share It

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಎರಡೂವರೆ ತಿಂಗಳಾಗಿದೆ. ಜೂನ್ 11 ರಂದು ಮೈಸೂರಿನಲ್ಲಿ ನಟ ದರ್ಶನ್ ಬಂಧನವಾಗಿತ್ತು.

ದರ್ಶನ್, ಕೊಲೆ ಪ್ರಕರಣ ಒಂದರಲ್ಲಿ ಬಂಧನಕ್ಕೆ ಒಳಗಾಗುತ್ತಾರೆ ಎಂದು ಯಾರೂ ಸಹ ನಿರೀಕ್ಷಿಸಿರಲಿಲ್ಲ. ದರ್ಶನ್ ಅವರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದಾಗ ಜನರಿಗೆ ಆಶ್ಚರ್ಯವಾಗಿತ್ತು. ಇದೀಗ ತನಿಖೆ ಬಲು ಚುರುಕಾಗಿ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಆರೋಪ ಪಟ್ಟಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

ಚಾರ್ಜ್ ಶೀಟ್ ಸಲ್ಲಿಸಲು ಕೆಲವೇ ದಿನಗಳು ಬಾಕಿ ಇರುವಾಗ ಕೆಲವು ಕುತೂಹಲಕಾರಿ ವಿಷಯಗಳು ಹೊರಬಿದ್ದಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈ ವರೆಗೆ 52 ಸ್ಥಳಗಳಲ್ಲಿ ಮಹಜರು ಮಾಡಿದ್ದಾರೆ. ಮೈಸೂರು, ಬೆಂಗಳೂರು, ಚಿತ್ರದುರ್ಗಗಳಲ್ಲಿ ಈ ಪ್ರಕರಣದ ಕೆಲವು ಪ್ರಮುಖ ಸ್ಥಳ ಮಹಜರು ನಡೆದಿವೆ.

ಬೆಂಗಳೂರಿನ ಪಟ್ಟಣಗೆರೆ ಶೆಡ್, ದರ್ಶನ್, ಪವಿತ್ರಾ ಮನೆ, ಸ್ಟೂನಿ ಬ್ರೂಕ್ ಹೋಟೆಲ್, ಮೈಸೂರಿನ ಹೋಟೆಲ್, ಚಿತ್ರದುರ್ಗದಲ್ಲಿ ರೇಣುಕಾ ಸ್ವಾಮಿ ಮನೆ, ಆರೋಪಿಗಳ ಮನೆ ಇನ್ನಿತರೆ ಕಡೆಗಳಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ.

ಮಾತ್ರವಲ್ಲದೆ ಸುಮಾರು 150ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ಸಹ ದಾಖಲು ಮಾಡಿಕೊಂಡಿದ್ದಾರೆ. ಎಲ್ಲ ಆರೋಪಿಗಳು, ಅವರಿಗೆ ಸಂಬಂಧಿಸಿದವರು, ಅವರೊಟ್ಟಿಗೆ ಸಂಪರ್ಕದಲ್ಲಿದ್ದವರು, ಪ್ರಕರಣದ ಬಗ್ಗೆ ಗೊತ್ತಿದ್ದವರು ಇನ್ನೂ ಹಲವರ ವಿಚಾರಣೆ ಈಗಾಗಲೇ ನಡೆದಿದೆ.

ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಅವನ್ನು ಸ್ಥಳ ಮಹಜರು ದಾಖಲೆ, ಸಾಕ್ಷಿಗಳೊಟ್ಟಿಗೆ ಸಮೀಕರಿಸಿದ್ದಾರೆ. ಹಾಗೂ ಪ್ರಕರಣದ ಟೈಮ್ ಲೈನ್ ಮ್ಯಾಚ್ ಮಾಡಲು ಸಹ ಬಳಸಿಕೊಂಡಿದ್ದಾರೆ.

ಅಂದಹಾಗೆ ಜೂನ್ 11 ರಂದು ಬೆಳ್ಳಂಬೆಳಿಗ್ಗೆ ನಟ ದರ್ಶನ್ ಬಂಧನವಾಗಿತ್ತು. ಮೈಸೂರಿನಲ್ಲಿ ದರ್ಶನ್ ಅವರನ್ನು ಪೊಲೀಸರು ಬಂಧಿಸಲು ಹೋದಾಗ ಮೊದಲು ದರ್ಶನ್ ಹೀಗೆ ಹೇಳಿದ್ದರು: ‘ನನ್ನ ಜೊತೆಗಿದ್ದ ಹುಡುಗರಿಂದ ನಾನು ಹಾಳಾದೆ’ ಎಂದು ಹೇಳಿದರಂತೆ.

ಅದಾದ ಬಳಿಕ ನಟಿ ಪವಿತ್ರಾ ಗೌಡ ಅವರನ್ನು ಬಂಧಿಸಲು ಯತ್ನಿಸಿ ಅವರ ಮನೆ ಹಾಗೂ ಇನ್ನೊಂದು ಸ್ಥಳಕ್ಕೆ ಪೊಲೀಸರು ಹೋಗಿದ್ದಾರೆ. ಆದರೆ ಎರಡೂ ಸ್ಥಳಗಳಲ್ಲಿ ಪವಿತ್ರಾ ಇರಲಿಲ್ಲ. ಕೊನೆಗೆ ದರ್ಶನ್ ಮೊಬೈಲ್ ನಿಂದಲೇ ಪವಿತ್ರಾಗೆ ಕರೆ ಮಾಡಿಸಿದ ಪೊಲೀಸರು ಪವಿತ್ರಾರನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆಸಿಕೊಂಡು ಬಂಧಿಸಿದ್ದಾರೆ.


Share It

You cannot copy content of this page