ಅಪರಾಧ ಸಿನಿಮಾ ಸುದ್ದಿ

ಕನ್ನಡ ನಟಿ ಪದ್ಮಜಾ ರಾವ್ ಗೆ 3 ತಿಂಗಳು ಜೈಲುಶಿಕ್ಷೆ, 40 ಲಕ್ಷ ರೂ. ದಂಡ!

Share It

ಮಂಗಳೂರು : ಕನ್ನಡದ ಹಿರಿಯ ನಟಿ ಪದ್ಮಜಾ ರಾವ್​ಗೆ ಸಂಕಷ್ಟ ಎದುರಾಗಿದೆ. ಚೆಕ್​ ಬೌನ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿ ಅವರಿಗೆ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯವು 3 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ನ್ಯಾಯಾಲಯ 40.20 ಲಕ್ಷ ರೂಪಾಯಿ ದಂಡವನ್ನು ಕೂಡ ವಿಧಿಸಿದೆ. ಇದರಿಂದ ನಟಿ ಪದ್ಮಜಾ ರಾವ್ ಅವರು ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ.

‘ವೀರೂ ಟಾಕೀಸ್’ ಸಂಸ್ಥೆಯ ಮಾಲೀಕ ವೀರೇಂದ್ರ ಶೆಟ್ಟಿ ಅವರ ಬಳಿ ಪದ್ಮಜಾ ರಾವ್ ಅವರು 40 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಭದ್ರತೆ ದೃಷ್ಟಿಯಿಂದ ಪದ್ಮಜಾ ರಾವ್ ಚೆಕ್ ನೀಡಿದ್ದರು. ಇದು ನಡೆದಿದ್ದು 2020ರ ಜೂನ್‌ 17ರಂದು. ಆದರೆ, ಪದ್ಮಜಾ ಅವರು ಹಣ ಪಾವತಿ ಮಾಡಿಲ್ಲ. ಹೀಗಾಗಿ, ವೀರೇಂದ್ರ ಶೆಟ್ಟಿ ಅವರು ನ್ಯಾಯಾಲಯದ ಮೊರೆ ಹೊಗಿದ್ದರು.

ಈ ಮೊದಲು ವಿಚಾರಣೆಗೆ ಹಾಜರಾದ ಪದ್ಮಜಾ ರಾವ್ ಅವರು ಬೇರೆಯದೇ ರೀತಿಯ ಹೇಳಿಕೆ ನೀಡಿದ್ದರು. ನಾನು ಸಾಲವನ್ನೇ ಪಡೆದಿಲ್ಲ ಎಂದಿದ್ದ ಅವರು, ಚೆಕ್ ನೀಡಿದ ವಿಚಾರವನ್ನೂ ಅಲ್ಲಗಳೆದಿದ್ದರು. ಜೊತೆಗೆ ಪದ್ಮಜಾ ರಾವ್ ಅವರ ಚೆಕ್​ನ ಕದ್ದು ಸಹಿ ನಕಲು ಮಾಡಿದ ಆರೋಪವನ್ನು ಪದ್ಮಜಾ ರಾವ್ ಮಾಡಿದ್ದರು. ಆದರೆ, ಇದಕ್ಕೆ ಸಂಬಂಧಿಸಿ ಅವರು ಕೋರ್ಟ್ ನಲ್ಲಿ ಸಾಕ್ಷಿಗಳನ್ನು ಒದಗಿಸಲು ವಿಫಲರಾಗಿದ್ದಾರೆ.

ತೀರ್ಪಲ್ಲಿ ಏನಿದೆ?
ಈ ತೀರ್ಪಿನ ಪ್ರಕಾರ ಪದ್ಮಜಾ ರಾವ್ ಅವರು 40.20 ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಿದೆ. ಇದರಲ್ಲಿ 40.17 ಲಕ್ಷ ರೂಪಾಯಿ ಹಣವನ್ನು ದೂರುದಾರನಿಗೆ ಕೊಡಬೇಕಿದೆ. ಉಳಿದ 3 ಸಾವಿರ ರೂಪಾಯಿ ಹಣವನ್ನು ಅವರು ಸರ್ಕಾರಕ್ಕೆ ತುಂಬಬೇಕು. ಉಳಿದಂತೆ ಅವರು ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಿದೆ.

ನಟಿ ಪದ್ಮಜಾ ರಾವ್ ಅವರು ‘ಮುಂಗಾರು ಮಳೆ’ ಸೇರಿದಂತೆ ಕನ್ನಡದ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಪೋಷಕ ಪಾತ್ರ ಮಾಡಿದ್ದಾರೆ. ಸದ್ಯ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ನಾಯಕಿ ಭಾಗ್ಯಳ ಅತ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Share It

You cannot copy content of this page