ಅರ್ಥವಾಗದ ಭಾಷೆಯಲ್ಲಿ ಮೆಡಿಷನ್ ಬರೆಯುವಂತಿಲ್ಲ: ಕನ್ನಡದಲ್ಲೇ ಇರಬೇಕು ವೈದ್ಯರ ಚೀಟಿ
ಮಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ನೀಡುವ ಚೀಟಿ ಕನ್ನಡದಲ್ಲಿ ಬರೆಯುವಂತೆ ಸೂಚನೆ ನೀಡಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಯಚೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಇಂಗ್ಲಿಷ್‌ನಲ್ಲಿ ವೈದ್ಯರ ಚೀಟಿಯಿಂದ ಉಂಟಾಗುವ ತೊಂದರೆ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ನೋಟಿಸ್ ನೀಡಲಾಗಿದೆ. ಆದ್ದರಿಂದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಚೀಟಿ ಕನ್ನಡದಲ್ಲೇ ಬರೆಯುವಂತೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೂ ಆದೇಶ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕಾ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಅವಕಾಶಕ್ಕಾಗಿ ಡಾ.ಸರೋಜಿನಿ ಮಹಿಷಿ ವರದಿ ಶಾಸನ ಆಗಬೇಕು. ಆಗ ಸ್ಥಳೀಯರಿಗೆ ಉದ್ಯೋಗ ಸಿಗಲು ಸಾಧ್ಯವಿದೆ. ಹೀಗಾಗಿ ಡಾ. ಸರೋಜಿನಿ ಮಹಿಷಿ ಶಿಫಾರಸನ್ನು ಮುಂದಿನ ಅಧಿವೇಶನದಲ್ಲಿ ಸರ್ಕಾರ ಶಾಸನವಾಗಿ ರೂಪಿಸಲು ಮುಂದಾಗಬೇಕು ಎಂದು ಹೇಳಿದರು.
ಡಾ.ಸರೋಜಿನಿ ಮಹಿಷಿ ವರದಿಯಲ್ಲಿ 58 ವಿಭಾಗಗಳಿದ್ದು, ಈ ಕಾಲಕ್ಕೆ ಕೇವಲ 14 ವಿಭಾಗಗಳು ಮಾತ್ರ ಅನುಷ್ಠಾನಕ್ಕೆ ಯೋಗ್ಯವಾಗಿವೆ. ಹಾಗಾಗಿ, ವರದಿ ಯಥಾವತ್ ಜಾರಿ ಸಾಧ್ಯವಾಗದು. ಈ 14 ವಿಭಾಗಗಳ ಶಿಫಾರಸನ್ನು ಅನುಷ್ಠಾನಕ್ಕೆ ತರಬೇಕಾದರೆ ವರದಿ ಶಾಸನವಾಗಿ ಬದಲಾಗಬೇಕು. ಅದಕ್ಕಾಗಿ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆಯಾಗಿ ಬಳಿಕ ಶಾಸನ ರೂಪ ಪಡೆಯಬೇಕು. ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಎಲ್ಲ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಈ ವರದಿ ಕಾನೂನು ರೂಪ ಪಡೆದರೆ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ. 70 ರಷ್ಟು ಉದ್ಯೋಗ ಕಾನೂನು ಬದ್ಧವಾಗಿ ಪಡೆಯಲು ಸಾಧ್ಯವಾಗಲಿದೆ ಎಂದರು.
ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕನ್ನಡ ಅನುಷ್ಠಾನ ಸಮಿತಿಗಳು ಇದ್ದು, ಅವುಗಳ ಮೂಲಕ ಜಿಲ್ಲಾಡಳಿತ ಅಧೀನದ ಎಲ್ಲ ಇಲಾಖೆಗಳಲ್ಲೂ ಕನ್ನಡ ಕಡ್ಡಾಯ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ. ನವೆಂಬರ್ ೧ ರೊಳಗೆ ಎಲ್ಲ ಜಿಲ್ಲೆಗಳಲ್ಲೂ ಇದನ್ನು ಕಡ್ಡಾಯವಾಗಿ ಕಾರ್ಯರೂಪಕ್ಕೆ ತರುವಂತೆ ಸೂಚಿಸಲಾಗಿದೆ ಎಂದರು.


