ಹಾವೇರಿ ಬಳಿ ನ್ಯಾಷನಲ್ ಹೈವೆಯಲ್ಲಿ ರಸ್ತೆ ಅಪಘಾತ: ರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆ
ಹಾವೇರಿ : ನ್ಯಾಷನಲ್ ಹೈವೆ ಟೋಲ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿಯೇ ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳ್ಳಗೇರಿ ಟೋಲ್ ಬಳಿ ನಡೆದಿದೆ
ಶನಿವಾರ ಆಟೋ ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿ ಮೂವರು ಅಮಾಯಕರು ಸಾವನ್ನಪ್ಪಿದ ಹಿನ್ನೆಲೆ ಆಕ್ರೋಶಗೊಂಡ ಗ್ರಾಮಸ್ಥರು ಮತ್ತು ಮೃತರ ಸಂಬಂಧಿಕರು ಶವವಿಟ್ಟು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರ ವಿರುದ್ಧ ಚಳಗೇರಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಚಳಗೇರಿ-ಹರಿಹರ ಸರ್ವೀಸ್ ರೋಡನ್ನ ಬಂದ್ ಮಾಡಲಾಗಿದೆ. ಮೂರ್ನಾಲ್ಕು ತಿಂಗಳಾದರೂ ಸರ್ವಿಸ್ ರಸ್ತೆ ಕಾಮಗಾರಿ ಮುಗಿದಿಲ್ಲ. ಹೀಗಾಗಿ ಹರಿಹರದಿಂದ ಚಳಗೇರಿ ಕಡೆ ಬರುವ ಸರ್ವೀಸ್ ರೋಡ್ ಒಂದರಲ್ಲೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶೀಘ್ರವೇ ಸರ್ವೀಸ್ ರೋಡ್ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ದಾವಣಗೆರೆ ಮೂಲದ ಕುಟುಂಬವೊಂದು ಸಂಬಂಧಿಕರ ಅಂತ್ಯ ಸಂಸ್ಕಾರಕ್ಕೆ ನಿನ್ನೆ ಚಳಗೇರಿ ಗ್ರಾಮಕ್ಕೆ ಆಟೋದಲ್ಲಿ ಬಂದಾಗ ಅಪಘಾತ ಸಂಭವಿಸಿತ್ತು.
ಈ ವೇಳೆ ಕ್ಯಾಂಟರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ರು. ಚಿಕಿತ್ಸೆ ಫಲಕಾರಿಯಾಗದೇ ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಹೀಗಾಗಿ ಗ್ರಾಮಸ್ಥರು, ಮೃತರ ಸಂಬಂಧಿಕರು ಘಟನೆ ಖಂಡಿಸಿ ಶವ ಇಟ್ಟು ಪ್ರತಿಭಟನೆ ನಡೆಸಿದರು. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅವಘಡ ನಡೆದಿದೆ.


