ಫರುಖಾಬಾದ್ : 15 ಮತ್ತು 18 ವರ್ಷದ ಬಾಲಕಿಯರಿಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದನ್ನು ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇಬ್ಬರು ದಲಿತ ಬಾಲಕಿಯರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಮರದಲ್ಲಿ ಪತ್ತೆಯಾಗಿದ್ದರು. ಕಾಯಂಗಾಚ್ನ ಮಾವಿನ ತೋಪಿನಲ್ಲಿ ಈ ಬಾಲಕಿಯರ ಶವಗಳು ಪತ್ತೆಯಾಗಿದ್ದು, ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಫಾರುಖಾಬಾದ್ ಎಸ್‌ಪಿ ಅಲೋಕ್ ಪ್ರಿಯದರ್ಶಿನಿ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡುಬಂದಿದ್ದು, ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ತಮ್ಮ ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ಮೃತ ಬಾಲಕಿಯರ ತಂದೆ ಆರೋಪಿಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರದ ಅಡಿ ನ್ಯಾಯ ನಿರೀಕ್ಷಿಸುವುದು ಅಪರಾಧ ಎಂದು ಕಿಡಿಕಾರಿದ್ದಾರೆ. ನ್ಯಾಯ ಆದ್ಯತೆ ಅಲ್ಲ ಎಂದು ಭಾವಿಸಿದವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ದುರ್ಬಲ ಮತ್ತು ವಂಚಿತರ ವಿರುದ್ಧದ ಬಹುತೇಕ ಗಂಭೀರ ಪ್ರಕರಣ ಮುಚ್ಚಿ ಹಾಕಲಾಗಿದೆ. ಯೋಗಿ ಸರ್ಕಾರ ಪತನವಾಗುತ್ತಿದೆ. ಜನರಲ್ಲಿ ಬಿಜೆಪಿ ವಿರುದ್ಧ ಯಾವುದೆ ಆಶಾಭಾವನೆ ಉಳಿದಿಲ್ಲ ಎಂದಿದ್ದಾರೆ.
ಪ್ರಿಯಾಂಕಾ ಗಾಂಧಿ ಕೂಡ ಭಾರತದ ಎಲ್ಲಾ ಮಕ್ಕಳಿಗೆ ಸುರಕ್ಷತೆ ಹಕ್ಕು ನೀಡಬೇಕಿದ್ದು, ಎಲ್ಲಾ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ನೀಡುವುದು ಹಕ್ಕಾಗಿದೆ. ಆಡಳಿತ ಯಾಕೆ ಹರಿಬಿರಿಯಲ್ಲಿ ಬಾಲಕಿಯರ ಅಂತ್ಯಕ್ರಿಯೆ ನಡೆಸಿತು ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿನ ದಲಿತರ ಸ್ಥಿತಿ ಕುರಿತು ಮಾತನಾಡಿರುವ ಪ್ರಿಯಾಂಕಾ, ಉನ್ನಾವೋ ಅಥವಾ ಫಾರುಖಾಬಾದ್, ಹತ್ರಾಸ್ ಎಲ್ಲಾದರಲ್ಲೂ ಅದೇ ಕ್ರೂರ ಘಟನೆಗಳು ಮರುಕಳಿಸಿವೆ. ದಲಿತರು, ಹಿಂದುಳಿದ ವರ್ಗದವರು, ವಂಚಿತರು, ಬಡವರು, ಹೆಣ್ಣುಮಕ್ಕಳು ಅಥವಾ ಯಾರೇ ದುರ್ಬಲರು ನ್ಯಾಯದ ಭರವಸೆ ಕಳೆದುಕೊಂಡಿದ್ದಾರೆ ಎಂದಿದ್ದಾರೆ.