ಹೊಸದಿಲ್ಲಿ: ಆರೋಪ ಹೊತ್ತಯ ಜೈಲು ಸೇರಿ ಹೈರಾಣಾಗಿದ್ದ ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಇನ್ನೆರಡು ದಿನದಲ್ಲಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.
ಮೂರು ದಿನಗಳ ಹಿಂದಷ್ಟೇ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಅರವಿಂದ ಕೇಜ್ರೀವಾಲ್, ದಿಡೀರ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಘೋಷಣೆ ಮಾಡುವ ಮೂಲಕ ಶಾಕ್ ನೀಡಿದ್ದಾರೆ. ತಾವು ಆರೋಪ ಮುಕ್ತರಾಗಲು ಜನತೆಯ ಮುಂದೆ ಹೋಗಲು ನಿರ್ಧರಿಸುವುದಾಗಿ ಅವರು ಘೋಷಣೆ ಮಾಡಿದ್ದು, ನಾನು ಪ್ರಾಮಾಣಿಕ ಎಂದೆನಿಸಿದರೆ ಮಾತ್ರವೇ ಮುಂದೆ ನಮಗೆ ಅವಕಾಶ ನೀಡಿ ಎಂದು ಜನತೆಗೆ ಮನವಿ ಮಾಡಿಕೊಂಡಿದ್ದಾರೆ.
ಆ ಮೂಲಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮರುಚುನಾವಣೆ ಎದುರಿಸಲು ಕೇಜ್ರೀವಾಲ್ ತೀರ್ಮಾನಿಸಿದ್ದು, ನವೆಂಬರ್ನಲ್ಲಿ ದೆಹಲಿ ಚುನಾವಣೆ ನಡೆಸುವಂತೆ ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದಾರೆ. ಮೊನೀಶ್ ಸಿಸೋಡಿಯಾ ಸೇರಿದಂತೆ ನಾವೆಲ್ಲರೂ ಜನತಾ ತೀರ್ಪಿಗಾಗಿ ಅವರ ಮುಂದೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಅರವಿಂದ ಕೇಜ್ರೀವಾಲ್ ಘೋಷಣೆ ಮಾಡಿದ್ದಾರೆ.
ಜನ ಮರಳಿ ಆಯ್ಕೆ ಮಾಡುವವರೆಗೆ ನಾನು ಸಿಎಂ ಕುರ್ಚಿಯಲ್ಲಿ ಕೂರುವುದಿಲ್ಲ. ನನ್ನ ಮೇಲೆ ಮಾಡಿರುವ ಆರೋಪಗಳಿಗೆಲ್ಲ ಜನರಿಂದಲೇ ಉತ್ತರ ಬಯಸುತ್ತೇನೆ. ನಾವು ಪ್ರಾಮಾಣಿಕರು ಎನಿಸಿದರೆ ಮಾತ್ರವೇ ಆಪ್ ಪಕ್ಷವನ್ನು ಜನತೆ ಬೆಂಬಲಿಸಲಿ, ಇಂತಹ ಅಗ್ನಿಪರೀಕ್ಷೆಗೆ ನಾವು ಸಿದ್ಧವಿದ್ದೇವೆ ಎಂದು ಅರವಿಂದ ಕೇಜ್ರೀವಾಲ್ ಘೊಷಣೆ ಮಾಡಿದ್ದಾರೆ.

