ರಾಯಭಾಗ: ಗೃಹಲಕ್ಷ್ಮೀ ಹಣವೇ ಬಿಡುಗಡೆಯಾಗಿಲ್ಲ, ಸರಕಾರ ಗ್ಯಾರಂಟಿ ನಿಲ್ಲಿಸುತ್ತದೆ ಎಂಬ ಸುಳ್ಳು ಸುದ್ದಿಗಳು ಹಬ್ಬಿರುವ ಹೊತ್ತಿನಲ್ಲೇ ಗೃಹಲಕ್ಷ್ಮೀ ಹಣ ಪಡೆದ ವೃದ್ಧೆಯೊಬ್ಬರು ಊರಿಗೆ ಊಟ ಹಾಕಿಸಿದ್ದಾರೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಅಕ್ಕಾತಾಯಿ ಲಂಗೋಟಿ ಎಂಬ ವೃದ್ಧೆ ತನಗೆ ಬಂದ ಹಣದಿಂದ ಊರಿಗೆಲ್ಲಾ ಹೋಳಿಗೆ ಊಟ ಹಾಕಿಸಿದ್ದಾರೆ. ಸಿದ್ದರಾಮಯ್ಯನವರು ಪ್ರತಿ ತಿಂಗಳು ಎರಡು ಸಾವಿರ ಹಣ ನೀಡ್ತಿದ್ದಾರೆ.
ರಾಜಕೀಯವಾಗಿ ಸಿದ್ದರಾಮಯ್ಯನವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಹೀಗಾಗಿ ಗ್ರಾಮದ ದೇವತೆಗೆ ಪೂಜೆ ಸಲ್ಲಿಸಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದೇನೆ ಎಂದು ಆಕೆ ಖುಷಿಯಿಂದ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ, ಐದು ಜನ ಮುತ್ತೈದೆಯರಿಗೆ ಉಡಿ ತುಂಬಿ ಅಜ್ಜಿ ಹರಿಸಿದ್ದಾರೆ. ಸರಕಾರ ಪ್ರತಿ ತಿಂಗಳು ಅಕ್ಕಿನಕೊಡುತ್ತಿದೆ. ಗೃಹಲಕ್ಷ್ಮೀ ಹಣ ಕೊಡುತ್ತಿದೆ. ನನಗೆ ವಯೋವೃದ್ಧೆಗೆ ಬರುವ ಸಹಜವಾದ ಪೆನ್ಷನ್ ಬರುತ್ತದೆ. ಜತೆಗೆ ಕರೆಂಟ್ ಬಿಲ್ ಫ್ರೀ ಇದೆ. ಹೀಗಾಗಿ, ಗೃಹಲಕ್ಷ್ಮೀ ಹಣದಿಂದ ನಾನು ಊರಿಗೆ ಊಟ ಹಾಕಿಸುವ ಮೂಲಕ ಸಿದ್ದರಾಮಯ್ಯ ಅವರ ಏಳಿಗೆ ಬಯಸಿದ್ದೇನೆ ಎನ್ನುತ್ತಾರೆ.
ಅಜ್ಜಿಯ ಕಾರ್ಯಕ್ಕೆ ಸುಟ್ಟಟ್ಟಿ ಗ್ರಾಮದ ಮಹಿಳೆಯರು ಸಾಥ್ ನೀಡಿದ್ದು, ಅಜ್ಜಿಯ ಜತೆ ಸೇರಿ ಊರವರಿಗೆಲ್ಲ ಹೋಳಿಗೆ ತಯಾರಿಸಿ ಬಡಿಸಿ ಖುಷಿ ಪಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಸರಕಾರಕ್ಕೆ ಒಳಿತಾಗಲಿ ಎಂದು ಪೂಜೆಯನ್ನು ಸಲ್ಲಿಸಿದ್ದಾರೆ.

