16 ವರ್ಷದ ಅಪ್ರಾಪ್ತ ಯುವತಿ ಮೇಲೆ ಗೆಳೆಯನ ಮುಂದೆಯೇ ಸಾಮೂಹಿಕ ಅತ್ಯಾಚಾರ
ವಡೋದರಾ : 16 ವರ್ಷದ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಸ್ನೇಹಿತನ ಸಮ್ಮುಖದಲ್ಲಿ ಅತ್ಯಾಚಾರ ನಡೆದಿರುವ ಘಟನೆ ಬಾಯಿಲ್ ನಗರದಲ್ಲಿ ಶುಕ್ರವಾರ ತಡ ರಾತ್ರಿ ನಡೆದಿದೆ.
ಬಾಲಕಿ ಮತ್ತು ಅವಳ ಸ್ನೇಹಿತ ರಸ್ತೆಯ ಬದಿಯಲ್ಲಿ ಕುಳಿತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಐವರು ಅಸಭ್ಯ ಹಾಗೂ ಅಶ್ಲೀಲವಾಗಿ ಮಾತನಾಡ ತೊಡಗಿದ್ದಾರೆ. ಇದಕ್ಕೆ ಆಕ್ಷೇಪಣೆ ಮಾಡಿದ ಸ್ನೇಹಿತನ ಮೇಲೆ ಗಾಡಿಯಿಂದ ಇಳಿದ ಓರ್ವ ಹಲ್ಲೆ ಮಾಡಿದ್ದಾನೆ. ಇಬ್ಬರು ಅಲ್ಲಿಂದ ಹೊರಟು ಹೋಗಿದ್ದಾರೆ. ಬಳಿಕ ಇನ್ನಿಬ್ಬರು ಹುಡುಗಿಯನ್ನು ಹಿಡಿದು ಸ್ಥಳದಲ್ಲಿಯೇ ಅತ್ಯಾಚಾರ ಎಸಗಿದ್ದಾರೆ ಎಂದು ವಡೋದರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರೋಹನ್ ಆನಂದ್ ಸುದ್ದಿಗಾರರಿಗೆ ತಿಳಿಸಿದರು.
ತಡ ರಾತ್ರಿ 12: 30 ರ ಸುಮಾರಿಗೆ ಈ ಘಟನೆಯು ನಡೆದಿದ್ದು ಆ ವೇಳೆ ನವರಾತ್ರಿ ಪ್ರಯುಕ್ತ ಯಾವುದೇ ವಾಹನ ಸಂಚಾರ ಇರಲಿಲ್ಲ. ಜೊತೆಗೆ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದರಿಂದ ಕಡಿಮೆ ಬೀದಿ ದೀಪಗಳಿದ್ದು ಅತ್ಯಾಚಾರಕ್ಕೆ ಇವುಗಳೇ ಅನುವು ಮಾಡಿಕೊಟ್ಟಿದೆ ಎನ್ನಲಾಗುತ್ತಿದೆ. ಬಳಿಕ ಮನೆಗೆ ತೆರಳಿದ ಯುವತಿ ತನ್ನ ಪೋಷಕರಿಗೆ ವಿಷಯವನ್ನು ಮುಟ್ಟಿಸಿದ್ದಾಳೆ. ಪೋಷಕರು ಪೊಲೀಸರಿಗೆ ದೂರನ್ನು ನೀಡಿದ್ದಾರೆ.
ಈ ಕುರಿತಂತೆ ತನಿಖೆ ಆರಂಭವಾಗಿದ್ದು ಯುವತಿ ಮತ್ತು ಅವಳ ಸ್ನೇಹಿತ ರಾತ್ರಿ ಅತ್ಯಾಚಾರ ಎಸಗಿದವರನ್ನು ಗುರುತಿಸಲು ಕತ್ತಲಲ್ಲಿ ಸಾಧ್ಯವಾಗಿಲ್ಲ ಎಂದು ಆನಂದ್ ಹೇಳಿದ್ದಾರೆ. ಸ್ಥಳವನ್ನು ಪರಿಶೀಲನೆಗೆ ಒಳಪಡಿಸಿದ್ದು ವಿಧಿ ವಿಜ್ಞಾನ ತಂಡಗಳು ಪುರಾವೆಗಳ ಸಂಗ್ರಹದಲ್ಲಿ ತೊಡಗಿದ್ದಾರೆ. ತನಿಖೆ ವೇಳೆ ಬಾಲಕಿಯ ಕೆಲವು ಆಭರಣ ಮತ್ತು ವಸ್ತುಗಳು ಕಳುವಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ . ಅವರು 30 ಅಥವಾ 35 ವರ್ಷ ಮೇಲ್ಪಟ್ಟವರು. ಹಿಂದಿ ಮತ್ತು ಗುಜರಾತ್ ಎರಡು ಭಾಷೆ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಸಿಸಿಟಿವಿಯಲ್ಲಿ ಸೆರೆಯಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.


