ರಾಜಕೀಯ ಸುದ್ದಿ

ಇಂದು ಸಚಿವ ಸಂಪುಟ ಸಭೆ: ರಾಜ್ಯಪಾಲರ ವಿರುದ್ಧವೇ ಅಧಿಕಾರ ಚಲಾಯಿಸಲು ಮುಂದಾದ ಸರ್ಕಾರ!

Share It

ಬೆಂಗಳೂರು : ಮೈಸೂರಿನ ಮುಡಾ ಸೈಟ್ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್ ಸರ್ಕಾರ ಇದೀಗ ರಾಜ್ಯಪಾಲರ ವಿರುದ್ಧವೇ ಅಧಿಕಾರ ಚಲಾವಣೆಗೆ ಮುಂದಾಗಿದೆ.

ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಬಿಜೆಪಿ ಜೆಡಿಎಸ್ ಮಿತ್ರಪಕ್ಷಗಳ ನಾಯಕರ ವಿರುದ್ಧದ ಪ್ರಕರಣಗಳ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧದ ಕೇಸ್‌ಗಳ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಮೈತ್ರಿ ನಾಯಕರ ಮೇಲಿನ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಸಲಹೆ ನೀಡಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಆರ್ಟಿಕಲ್ 163 ಅಡಿ ಅಧಿಕಾರ ಚಲಾವಣೆಗೆ ಸಿದ್ದು ಪಡೆ ಸಿದ್ಧ: ಸಂವಿಧಾನದ ವಿಧಿ 163 ಅಡಿ ಇರುವ ಅಧಿಕಾರ ಚಲಾಯಿಸಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಇದರ ಅಡಿ ರಾಜ್ಯಪಾಲರ ಬಳಿ ಬಾಕಿ ಇರುವ ಪ್ರಾಸಿಕ್ಯೂಷನ್ ಅರ್ಜಿಗಳ ವಿಲೇವಾರಿಗೆ ಸಲಹೆ ನೀಡಲಿದೆ. ರಾಜ್ಯಪಾಲರ ಬಳಿ ಬಿಜೆಪಿ-ಜೆಡಿಎಸ್ ನಾಯಕರ ಪ್ರಾಸಿಕ್ಯೂಷನ್ ಅರ್ಜಿ ಬಾಕಿ ಇರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

163 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರ ರಾಜ್ಯ ಸಚಿವ ಸಂಪುಟಕ್ಕೆ ಇದೆ. ಇದೇ ಅಧಿಕಾರವನ್ನು ಬಳಸಿ ರಾಜ್ಯಪಾಲರಿಗೆ ಸರ್ಕಾರ ಸಲಹೆ ನೀಡಲಿದೆ.

ಯಾರಿಗೆಲ್ಲಾ ಇದೆ ಪ್ರಾಸಿಕ್ಯೂಷನ್ ಭೀತಿ?

ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಲೋಕಾಯುಕ್ತ ಹಾಗೂ ಎಸ್ಐಟಿ ಈಗಾಗಲೇ ಮನವಿ ಮಾಡಿವೆ. ಇದರ ಜೊತೆಗೆ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧದ ಪ್ರಾಸಿಕ್ಯೂಷನ್ ಅರ್ಜಿಗಳೂ ಬಾಕಿ ಇವೆ. ಈ ಪ್ರಾಸಿಕ್ಯೂಷನ್ ಅರ್ಜಿಗಳ ಇತ್ಯರ್ಥಕ್ಕೆ ರಾಜ್ಯಸರ್ಕಾರ ಸಲಹೆ ರವಾನಿಸಲಿದೆ.

ಈ‌ ಅರ್ಜಿಗಳ ಇತ್ಯರ್ಥ ಮಾಡಿ ಎಂದು ಸಲಹೆ ನೀಡಲಿದೆ. ಆ ಮೂಲಕ, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಕ್ಕೆ ಕೈ ಸರ್ಕಾರ ರಾಜ್ಯಪಾಲ ಗೆಹ್ಲೋಟ್ ಅವರಿಗೆ ಕೌಂಟರ್ ಕೊಡಲು ಮುಂದಾಗಿದೆ.


Share It

You cannot copy content of this page