ಅಪರಾಧ ಸುದ್ದಿ

ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಕರೆ: ಆರೋಪಿಗಳಿಗಾಗಿ ಪೊಲೀಸರ ಶೋಧ

Share It


ಬೆಂಗಳೂರು : ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ಹಿನ್ನೆಲೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಇಂಚಿಂಚೂ ತಪಾಸಣೆ ನಡೆಸಿ ಹುಸಿ ಬಾಂಬ್ ಸಂದೇಶವೆಂದು ಖಚಿತವಾಗುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಾನ್ಯತಾ ಟೆಕ್​ಪಾರ್ಕ್ ಮುಂಭಾಗದಲ್ಲಿರುವ ದಿ ನ್ಯೂ ಇಂಡಿಯನ್ ಪಬ್ಲಿಕ್ ಶಾಲೆಗೆ ದುಷ್ಕರ್ಮಿಗಳು ಹುಸಿ ಬಾಂಬ್ ಸಂದೇಶ ಕಳುಹಿಸಿದ್ದರು.

ಗುರುವಾರ ಮುಂಜಾನೆ 6.57ರ ಸುಮಾರಿಗೆ ಇ-ಮೇಲ್ ಮಾಡಿರುವ ಆಗಂತುಕರು ಶಾಲೆ ಆವರಣದಲ್ಲಿ ಐದು ಪೈಪ್​ಲೈನ್​ಗಳಲ್ಲಿ ಬಾಂಬ್ ಇಡಲಾಗಿದೆ. ಮಧ್ಯಾಹ್ನ 1.30ಕ್ಕೆ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಫಾದರ್ ಕೊಡಾಚಿ ಹೆಸರಿನ coldghost456@gmail.com ಹಾಗೂ askbirnorth@tipsglobal.net ಎಂಬ ಐಡಿಯಿಂದ ಬೆದರಿಕೆ ಕಳುಹಿಸಿದ್ದರು. ಆತಂಕಗೊಂಡ ಶಾಲಾ ಆಡಳಿತ ಮಂಡಳಿ ಕೂಡಲೇ ಮಕ್ಕಳಿಗೆ ರಜೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿತ್ತು.

ವಿಷಯ ತಿಳಿದು ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಬಾಂಬ್ ಸ್ಕ್ವಾಡ್​ ಪರಿಶೀಲಿಸಿದಾಗ ಹುಸಿ ಬಾಂಬ್ ಸಂದೇಶ ಎಂಬುದು ತಿಳಿದುಬಂದಿದೆ. ಶಾಲಾ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Share It

You cannot copy content of this page