ರಾಜಕೀಯ ಸುದ್ದಿ

ಋಣ ಸಂದಾಯಕ್ಕೆ ನಿಂತ ಸಾಹಿತಿ ಎಸ್.ಎಲ್.ಬೈರಪ್ಪ: ಸರಕಾರದ ವಿರುದ್ಧದ ಟೀಕೆಗೆ ರಮೇಶ್ ಬಾಬು ಗರಂ

Share It


ಬೆಂಗಳೂರು: ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಪ್ರಕರಣ ನ್ಯಾಯಾಂಗದ ಅಂಗಳದಲ್ಲಿದೆ. ಸಾಹಿತಿ ಎಸ್. ಎಲ್. ಬೈರಪ್ಪ ತಮ್ಮ ಎಂದಿನ ಚಾಳಿಯಂತೆ ರಾಜ್ಯಪಾಲರ ಕ್ರಮ ಸಮರ್ಥಿಸಲು ಹೊರಟಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ ಆಗಿರುತ್ತದೆ. ಕೇಂದ್ರ ಸರ್ಕಾರದಿಂದ ಅವರು ಪಡೆದಿರುವ 6 ಪ್ರಶಸ್ತಿಗಳಲ್ಲಿ 5 ಪ್ರಶಸ್ತಿಗಳು ಬಿಜೆಪಿ ಕಾರಣದಿಂದಲೇ ದೊರಕಿರುತ್ತದೆ. ಋಣ ಸಂದಾಯದ ಕಾರಣಕ್ಕಾಗಿ ರಾಜ್ಯ ಸರ್ಕಾರ ಟೀಕಿಸಿ ರಾಜ್ಯಪಾಲರನ್ನು ಸಮರ್ಥಿಸಿ ಅರೆ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯ ರಿಟ್ ಪಿಟಿಷನ್ ನಂ. 1224/2023 ಪ್ರಕರಣದಲ್ಲಿ ಇತ್ತೀಚಿಗೆ ಆದೇಶವನ್ನು ನೀಡಿ ರಾಜ್ಯಪಾಲರ ಸಂವಿಧಾನ ಬಾಹಿರ ಕಾರ್ಯಗಳಿಗೆ ತನ್ನ ಅಸಮ್ಮತಿ ವ್ಯಕ್ತಪಡಿಸಿರುತ್ತದೆ. ಇದೇ ಪ್ರಕರಣದಲ್ಲಿ ರಾಜ್ಯಪಾಲರು ವಿಧೇಯಕ ತಡೆಹಿಡಿಯುವುದು ಸರಿಯಾದ ಕ್ರಮ ಅಲ್ಲವೆಂದು ಹೇಳಿರುತ್ತದೆ. ಪಶ್ಚಿಮ ಬಂಗಾಳ, ಕೇರಳ, ಪಂಜಾಬ್, ತೆಲಂಗಾಣ, ಚತ್ತಿಸ್ ಗಡ್ ಮತ್ತು ತಮಿಳುನಾಡು ಪ್ರಕರಣಗಳಲ್ಲಿ ರಾಜ್ಯಪಾಲರ ನಡೆ ಸರಿ ಅಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಹೇಳಿರುತ್ತದೆ ಎಂದಿದ್ದಾರೆ.

ಮಧ್ಯಪ್ರದೇಶದ ಹೈ ಕೋರ್ಟ್ ತನ್ನ ತೀರ್ಪಿನಲ್ಲಿ ರಾಜ್ಯಪಾಲರು ಸಂವಿಧಾನದ ನಿಯಮಗಳಿಗೆ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ತಮ್ಮ ತೀರ್ಮಾನವನ್ನು ತೆಗೆದುಕೊಳ್ಳಬೇಕೇ ಹೊರತು ತಮ್ಮ ವೈಯಕ್ತಿಕ ಅನಿಸಿಕೆಗಳಿಗೆ ಅನುಗುಣವಾಗಿ ಆದೇಶ ನೀಡುವುದು ಅಥವಾ ವರ್ತಿಸುವುದು ತಪ್ಪೆಂದು ಬಹಳ ಸ್ಪಷ್ಟವಾಗಿ ಹೇಳಿರುತ್ತದೆ ಎಂದು ತಿಳಿಸಿದ್ದಾರೆ

ಸ್ವಯಂ ಘೋಷಿತ ವಿಶ್ವ ವಿಖ್ಯಾತ ಸಾಹಿತಿ ಅರೆ ಸಂವಿಧಾನ ತಜ್ಞ ಎಸ್. ಎಲ್. ಬೈರಪ್ಪನವರಿಗೆ ನ್ಯಾಯಪೀಠಗಳ ತೀರ್ಪುಗಳನ್ನು ಓದಲು ಬಹುಶಃ ಸಮಯದ ಕೊರತೆ ಇರಬಹುದು? ಭೈರಪ್ಪನವರು ಬಿಜೆಪಿ ಕೇಂದ್ರ ಸರ್ಕಾರದಲ್ಲಿ ರಾಜ್ಯಪಾಲರ ಹುದ್ದೆಯ ಆಮಿಷವನ್ನೂ ಪಡೆದಿರಬಹುದು ಎಂಬ ಆರೋಪ ಮಾಡಿದ್ದಾರೆ.

ಬೈರಪ್ಪನವರ ಸಾಹಿತ್ಯವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಅನೇಕರು ಟೀಕಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಯು. ಆರ್. ಅನಂತಮೂರ್ತಿ, ಇವರ ಆವರಣ ಕೃತಿ ಬಗ್ಗೆ ತಮ್ಮ ಅಭಿಪ್ರಾಯ ನೀಡಿ, ಬೈರಪ್ಪನ ಸಾಹಿತ್ಯ ಅಪಾಯಕಾರಿ ಮತ್ತು ಇವರ ಸಾಹಿತ್ಯ ಸಮಾಜಕ್ಕೆ ಮತ್ತು ಸಮುದಾಯಗಳಿಗೆ ಪೂರಕವಲ್ಲ ಎಂದು ಹೇಳಿದ್ದರು.

ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಬೈರಪ್ಪ ತಮ್ಮ ಸಾಹಿತ್ಯ ಮತ್ತು ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಬಿಜೆಪಿಮಯಗೊಳಿಸಿದ್ದಾರೆ. ಮೊದಲಿನಿಂದ ಮೂಲಭೂತವಾದಗಳಿಗೆ ತಮ್ಮ ಸಾಹಿತ್ಯ ಸಮರ್ಪಣೆಗೊಳಿಸಿಕೊಂಡಿರುವ ಬೈರಪ್ಪ, ರಾಜ್ಯಪಾಲರ ನಡೆ ಪ್ರಶ್ನಿಸಬಾರದು ಎಂದು ಹೇಳಿರುವುದು ಅವರ ಮನಸ್ಥಿತಿಗೆ ಅನುಗುಣವಾಗಿದೆ. ಬೈರಪ್ಪ ಇಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುವ ಬದಲು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳ ಚಟುವಟಿಕೆಗಳಲ್ಲಿ ಹೇಳಿದರೆ ಹೆಚ್ಚು ಚಪ್ಪಾಳೆ ಗಿಟ್ಟಿಸಬಹುದು ಎಂದು ಟೀಕಿಸಿದ್ದಾರೆ.

ದೇಶದಲ್ಲಿ ಬೊಮ್ಮಾಯಿ ಪ್ರಕರಣ ಒಳಗೊಂಡಂತೆ ಇತ್ತೀಚಿನ ತಮಿಳುನಾಡು ರಾಜ್ಯಪಾಲರ ಪ್ರಕರಣದವರೆಗೆ ಸುಪ್ರೀಂ ಕೋರ್ಟ್ ಹಲವಾರು ತೀರ್ಪು ನೀಡಿರುತ್ತದೆ ಮತ್ತು ರಾಜ್ಯಪಾಲರ ನಡೆ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿರಬೇಕು ಮತ್ತು ಸಂವಿಧಾನದ ಅಡಿಯಲ್ಲಿ ದತ್ತ ಅಧಿಕಾರಗಳನ್ನು ಮಾತ್ರ ಚಲಾಯಿಸಬೇಕು ಎಂದು ಹೇಳಿರುತ್ತದೆ. ರಾಜ್ಯಪಾಲರು ಚುನಾಯಿತ ಸರ್ಕಾರಗಳ ಮೇಲೆ ಸವಾರಿ ಮಾಡಲು ಹೊರಟರೆ ಅದು ಜನಾಭಿಪ್ರಾಯಕ್ಕೆ ಮತ್ತು ಜನತಂತ್ರಕ್ಕೆ ಅಪಚಾರವಾಗುತ್ತದೆ. ರಾಜ್ಯಪಾಲರು ಕೇಂದ್ರ ಸರ್ಕಾರಗಳ ಸೂಚನೆಗೆ ಅನುಗುಣವಾಗಿ ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಮೂಗು ತೂರಿಸಲು ಅವಕಾಶವಿಲ್ಲವೆಂದು ಸಂವಿಧಾನ ಮತ್ತು ನ್ಯಾಯಾಲಯ ಬಹಳ ಸ್ಪಷ್ಟವಾಗಿ ತಿಳಿಸಿರುತ್ತವೆ. ಆದರೆ ವಿಶ್ವ ವಿಖ್ಯಾತ ಸಾಹಿತಿಗಳಿಗೆ ಜಾಣಕುರುಡುತನ ಮತ್ತು ಕಿವುಡುತನ ಒಮ್ಮೊಮ್ಮೆ ಆವರಿಸಿಕೊಳ್ಳುತ್ತದೆ ಎಂದು ಜರಿದಿದ್ದಾರೆ.

ಎಸ್. ಎಲ್.ಬೈರಪ್ಪ ಇಂತಹ ವಿಷಯಕ್ಕೆ ಮೂಗು ತೂರಿಸಿ ಮಾತನಾಡುವ ಬದಲು ಭಾರತೀಯ ಜನತಾ ಪಕ್ಷದಲ್ಲಿ ಯಾವುದಾದರೂ ಹುದ್ದೆ ಬೇಡಿ ಪಡೆದು ರಾಜಕೀಯ ಹೇಳಿಕೆ ನೀಡಿದರೆ ಅದು ಸರಿಯಾದ ಕ್ರಮವಾಗುತ್ತದೆ. ಯಾರನ್ನೋ ಮೆಚ್ಚಿಸಲು ಇಂತಹ ಹೇಳಿಕೆ ನೀಡಿ ನಗೆಪಾಟಲಿಗೆ ಗುರಿಯಾಗಿ ಬೆತ್ತಲಾಗುವುದು ಬೇಡ. ಬಹುಶಃ ಇಂತಹ ಹೇಳಿಕೆಗಳ ಮೂಲಕ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಿಶ್ವವಿದ್ಯಾಲಯಗಳಿಂದ ಮತ್ತೊಂದು ಗೌರವ ಡಾಕ್ಟರೇಟ್ ಪಧವಿ ನಿರೀಕ್ಷೆ ಇಟ್ಟುಕೊಂಡಿರಬಹುದು. ಬೈರಪ್ಪನವರ ಈ ಹೇಳಿಕೆಗೆ ಬಿಜೆಪಿ ಆಡಳಿತದ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿದರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.


Share It

You cannot copy content of this page