ಕಾರವಾರ : ಹಲವು ತಿಂಗಳ ಹಿಂದೆ ಅಂಕೋಲಾ ತಾಲೂಕು ಶಿರೂರು ಗುಡ್ಡ ಕುಸಿತದಲ್ಲಿ ನದಿ ನೀರು ಪಾಲಾಗಿದ್ದ ಕೇರಳದ ಅರ್ಜುನನ ಲಾರಿ ಕೊನೆಗೂ ಪತ್ತೆಯಾಗಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಾಗಿದೆ.
ಮೂರನೇ ಹಂತದ ಕಾರ್ಯಾಚರಣೆ ನಡೆಯುತ್ತಿರುವ ಗುಡ್ಡ ಕುಸಿತದ ಸ್ಥಳದಲ್ಲೇ ಇದು ಪತ್ತೆಯಾಗಿದೆ. ಖ್ಯಾತ ಮುಳುಗುತಜ್ಞರಾಗಿರುವ ಈಶ್ವರ್ ಮಲ್ಪೆ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಲಾರಿ ಚಕ್ರ ಮೊದಲಿಗೆ ಕಂಡುಬಂದಿದೆ. ಲಾರಿ ತಲೆ ಕೆಳಗಾದ ಸ್ಥಿತಿಯಲ್ಲಿ ನೀರಿನಲ್ಲಿ ಮುಳುಗಿದ್ದು ಲಾರಿ ಚಕ್ರಕ್ಕೆ ಈಶ್ವರ ಮಲ್ಪೆ ಹಗ್ಗ ಕಟ್ಟಿ ಬಂದಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಈ ದುರ್ಘಟನೆ ಇಡೀ ದೇಶಾದ್ಯಂತ ಬಾರಿ ಪ್ರಮಾಣದಲ್ಲಿ ಸುದ್ದಿ ಮಾಡಿತ್ತು. ಮಾತ್ರವಲ್ಲ ಕೇರಳ ಸರ್ಕಾರ ಸ್ವತಃ ತನ್ನ ಸಚಿವರನ್ನು ಘಟನೆ ನಡೆದ ಸ್ಥಳಕ್ಕೆ ಕಳಿಸಿತ್ತು. ಜತೆಗೆ ಕೇರಳದ ಮಾಧ್ಯಮಗಳ ದಂಡು ಸ್ಥಳಕ್ಕೆ ಆಗಮಿಸಿ ಸತತವಾಗಿ ಕಾರ್ಯಾಚರಣೆಯ ವರದಿ ಪ್ರಕಟಿಸಿದ್ದನ್ನು ಇಲ್ಲಿ ನೆನಪಿಸಬಹುದು.