ಕೊಲ್ಕತ್ತಾ: ಕೊಲ್ಕತ್ತಾ ಆರ್ ಜಿ ಕರ್ ಆಸ್ಪತ್ರೆ ಟ್ರೈನಿ ವೈದ್ಯೆಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಒಂದೊಂದೇ ಅಂಶಗಳು ಬೆಳಕಿಗೆ ಬರುತ್ತಿದ್ದು, ಆಕೆಯ ಕೊಲೆಯ ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತು ಎಂಬುದು ಇದೀಗ ಬೆಳಕಿಗೆ ಬಂದಿದೆ.
ಎಸ್ಐಟಿ ಮತ್ತು ಸಿಬಿಐ ತನಿಖೆ ನಡೆಯುತ್ತಿದ್ದು, ವೈದ್ಯೆಯ ಪೋಷಕರಿಗೆ ಬಂದ ಕರೆಗಳ ಆಧಾರದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಅಂಶಗಳು ಪತ್ತೆಯಾಗಿವೆ. ಪೋಷಕರಿಗೆ ಆಸ್ಪತ್ರೆಯಿಂದ ಕರೆ ಮಾಡಿದ್ದವರು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.
ಮೊದಲಿಗೆ ಕರೆ ಮಾಡಿದ ವ್ಯಕ್ತಿ, ‘ನಿಮ್ಮ ಮಗಳ ಆರೋಗ್ಯ ಸರಿಯಿಲ್ಲ, ವೈದ್ಯರು ನಿಮ್ಮನ್ನು ಕರೆಯಲು ಹೇಳಿದ್ದಾರೆ. ಆಸ್ಪತ್ರೆಗೆ ಬನ್ನಿ, ಮುಂದಿನದ್ದೆಲ್ಲ ವೈದ್ಯರೇ ಹೇಳುತ್ತಾರೆ ಎಂದಿದ್ದಾರೆ. ‘ಏನಾಯ್ತು, ಜ್ವರವೇನಾದರೂ ಬಂದಿದೆಯಾ ಏನು’ ಎಂಬ ಪೋಷಕರ ಪ್ರಶ್ನೆಗೆ ಅದೆಲ್ಲ ಗೊತ್ತಿಲ್ಲ, ಡಾಕ್ಟರ್ ಹತ್ತಿರ ಬಂದು ಮಾತಾಡಿ ಎಂದಿದ್ದಾರೆ.
ಎರಡನೇ ಬಾರಿಗೆ ಕರೆ ಮಾಡಿದ ವ್ಯಕ್ತಿ ನಿಮ್ಮ ಮಗಳು ಸಿರೀಯಸ್ ಆಗಿದ್ದಾರೆ, ಬೇಗ ಆಸ್ಪತ್ರೆಗೆ ಬನ್ನಿ ಎಂದು ಕರೆದಿದ್ದಾರೆ. ಗಾಬರಿ ಹೆಚ್ಚಾದ ಪೋಷಕರು ಏನಾಯ್ತು ಏನಾಯ್ತು ಎಂದು ಪ್ರಶ್ನೆ ಮಾಡಿದ್ದು, ಅದೆಲ್ಲ ಡಾಕ್ಟರ್ ಹೇಳ್ತಾರೆ ಬನ್ನಿ ಎಂದು ಕರೆದಿದ್ದಾರೆ.
ಮೂರನೇ ಬಾರಿಗೆ ಕರೆ ಮಾಡಿದ ವ್ಯಕ್ತಿ, ನಿಮ್ಮ ಮಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಸೂಸೈಡ್ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಪದೇಪದೆ ಕರೆ ಮಾಡಿ, ಪೋಷಕರ ಮನಸ್ಸಲ್ಲಿ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಭಾವನೆ ಬರುವಂತೆ ಮಾಡುವುದು ಕರೆ ಮಾಡಿದವರ ಉದ್ದೇಶವಾಗಿತ್ತು ಎನ್ನಲಾಗಿದೆ.