ಬೆಂಗಳೂರು: ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ಈಗಾಗಲೇ ಐಐಎಸ್ಸಿ ತಜ್ಞರು ಬೆಂಗಳೂರಿನಲ್ಲಿ ಈ ಹಿಂದೆ ಶೆ. 70 ರಷ್ಟಿದ್ದ ಪರಿಸರದ ಪ್ರಮಾಣ ಶೇ.3 ಕ್ಕೆ ಇಳಿಕೆಯಾಗಿದೆ ಎಂಬ ವರದಿ ನೀಡಿದ್ದರು.
ಇದೀಗ ಕೇಂದ್ರ ಸರ್ಕಾರದ ‘ಸ್ವಚ್ಛ ವಾಯು ಸರ್ವೇಕ್ಷಣ-2025 ವಾರ್ಷಿಕ ಶುದ್ಧ ಗಾಳಿ ಸಮೀಕ್ಷಾ ವರದಿಯಲ್ಲಿ ರಾಜಧಾನಿಯು 28 ರಿಂದ 36ನೇ ಸ್ಥಾನಕ್ಕೆ ಕುಸಿದಿದೆ ಎಂದು ತಿಳಿಸಿದೆ.
ವಾಹನ ಸಂಚಾರ ಹೆಚ್ಚಳದಿಂದ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿತವಾಗಿದೆ. ರಸ್ತೆ ನಿರ್ಮಾಣ ಕಾಮಗಾರಿಯೂ ಸೇರಿ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಂದಲೂ ಗಾಳಿಯ ಗುಣಮಟ್ಟ ಕುಸಿತ ಕಂಡಿದೆ.
ಸದ್ಯ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಬಿಡುಗಡೆಗೊಳಿಸಿರುವ ಸ್ವಚ್ಛ ವಾಯು ಸರ್ವೆಕ್ಷಣ-2025’ರ ವಾರ್ಷಿಕ ಶುದ್ಧ ಗಾಳಿ ಸಮೀಕ್ಷೆ ವರದಿಯಲ್ಲಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿದಿರುವುದು ಕಂಡುಬಂದಿದೆ.
ಬೆಂಗಳೂರು ಪರ್ಟಿಕ್ಯುಲೇಟ್ ಮ್ಯಾಟರ್ (ಪಿಎಂ)-10 ಮತ್ತು ಪಿಎಂ -2.5 ಧೂಳಿನ ಕಣಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಬೆಂಗಳೂರು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಜೆ ರೇಣುಕಾ ಪ್ರಸಾದ್, ಇದು ಆತಂಕಕಾರಿ ವಿಷಯ.
ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣ ಹೋಮವಾಗುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.
ಗಾಳಿ ಗುಣಮಟ್ಟ ವಿಚಾರದಲ್ಲಿ ಬೆಂಗಳೂರು 2024ರಲ್ಲಿ 28 ನೇ ಸ್ಥಾನ ಪಡೆದುಕೊಂಡಿತ್ತು.
ಆದರೆ, ಈ ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ನಡುವೆಯೂ ಗಾಳಿ ಗುಣಮಟ್ಟ ಕಡಿಮೆಯಾಗಿ 36 ನೇ ಸ್ಥಾನಕ್ಕೆ ಕುಸಿದಿದೆ. ಹೀಗೆ ವಾಯುಮಾಲಿನ್ಯದ ಪ್ರಮಾಣ ಏರಿಕೆ ಆಗುತ್ತಾ ಹೋದರೆ ಬೆಂಗಳೂರು ಮತ್ತೊಂದು ದೆಹಲಿ ಅಗಲಿದೆ ಎಂದು ಪರಿಸರ ಹೋರಾಟಗಾರ ವಿನೋದ್ ಜೇಕಬ್ ಅಭಿಪ್ರಾಯಪಟ್ಟಿದ್ದಾರೆ.