ರಾಜಕೀಯ ಸುದ್ದಿ

ಎಲ್ಲಿ ಅಡಗಿದೆ ನಿಮ್ಮ ಟ್ವೀಟರ್ ಪಾಂಡಿತ್ಯ: ಬಿಜೆಪಿ ನಾಯಕರಿಗೆ ವ್ಯಂಗ್ಯದಲಿ ತಿವಿದ ಸಚಿವ ರಾಮಲಿಂಗಾ ರೆಡ್ಡಿ

Share It

ಬೆಂಗಳೂರು: ಸಣ್ಣ ವೈಫಲ್ಯವನ್ನು ಕುಣಿದಾಡಿಕೊಂಡು ವಿರೋಧಿಸುವ ಬಿಜೆಪಿ ನಾಯಕರ ಟ್ವೀಟರ್ ಪಾಂಡಿತ್ಯ ಈಗ ಅದೆಲ್ಲಿ ಅಡಗಿದೆಯೋ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಸಂಸದರೇ ಮತ್ತು ಕೇಂದ್ರ ಮಂತ್ರಿಗಳಾದ ಸೀತಾರಾಮನ್, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಅವರೇ, ಬೆಂಗಳೂರಿನಲ್ಲಿ ಮೆಟ್ರೋ ದರ ಮತ್ತು ಹಿಂದಿನ ಸರ್ಕಾರದ ಅವಧಿಯಲ್ಲಿ ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಸ್ವಲ್ಪ ಏರಿಕೆಯಾದಾಗಲೂ ಬೀದಿಗಿಳಿದು ಅಬ್ಬರಿಸುತ್ತಿದ್ದ ನೀವು, ಕೇಂದ್ರದ ವೈಫಲ್ಯ ಎಂದು ಬಣ್ಣಿಸಲು ಪದಗಳೇ ಸಾಲದಂತೆ ಟೀಕಿಸುತ್ತಿದ್ದಿರಿ ಎಂದಿದ್ದಾರೆ.

ನಿಮ್ಮ ಆ ಅಂದಿನ ಆಕ್ರೋಶ ಈಗ ಎಲ್ಲಿ ಮರೆಯಾಗಿದೆ? ಗಂಟಲು ಹರಿಯುವಂತೆ ಜನರ ದಿಕ್ಕು ತಪ್ಪಿಸಿ ರಾಜ್ಯ ಸರ್ಕಾರದ ಮೇಲೆ ಕೂಗಾಡುವ ನಿಮ್ಮ ಬೂಟಾಟಿಕೆಯ ಬಣ್ಣ ಈಗ ಬಯಲಾಗಿದೆ ಅಲ್ಲವೇ?!  ನಗರದ ಜೀವನಾಡಿಗಳಾದ ಲಕ್ಷಾಂತರ ಆಟೋ ಚಾಲಕರು ಇಂದು ಬೆಲೆ ಏರಿಕೆ ಮಾತ್ರವಲ್ಲದೆ, LPG (ಆಟೋ ಗ್ಯಾಸ್) ಸಿಗದೆ ಬೀದಿಯಲ್ಲಿ ಕಣ್ಣೀರು ಹಾಕುತ್ತಿದ್ದರೆ, ನಿಮ್ಮ “ಟ್ವಿಟರ್ ಪಾಂಡಿತ್ಯ” ಎಲ್ಲಿ ಅಡಗಿದೆ? ಎಂದು ಟೀಕಿಸಿದ್ದಾರೆ.

ನಿಮಗೆ, ಲಕ್ಷಾಂತರ ಆಟೋ ಚಾಲಕರ ಮನೆಗಳ ಒಲೆ ಆರಿರುವುದು ಕಾಣುತ್ತಿಲ್ಲವೇ? ಇದು ಬಡವರ ಮೇಲಿನ ಅಸಡ್ಡೆಯಲ್ಲದೆ ಮತ್ತೇನು?ದೆಹಲಿಯಲ್ಲಿ ನಿಮ್ಮದೇ ಸರ್ಕಾರವಿದೆ, ಪೆಟ್ರೋಲಿಯಂ ಇಲಾಖೆ ನಿಮ್ಮದೇ ಕೈಯಲ್ಲಿದೆ. ಹೀಗಿದ್ದರೂ ಬೆಂಗಳೂರಿಗೆ ಗ್ಯಾಸ್ ಪೂರೈಸಲು ಕೇಂದ್ರ ಸರ್ಕಾರಕ್ಕೆ ಕನಿಷ್ಠ ಮನವಿ ಮಾಡಲು ನಿಮಗೆ ‘ತಾಕತ್ತು’ ಇಲ್ಲವೇ? ಅಥವಾ ಕೇವಲ ಪ್ರಚಾರದ ಪೋಸ್ಟರ್‌ಗಳಿಗೆ ಮಾತ್ರ ನಿಮ್ಮ ಮುಖಗಳು ಸೀಮಿತವೇ? ಎಂದಿದ್ದಾರೆ.

ನಿಮ್ಮ ಹೈಟೆಕ್ ರಾಜಕೀಯಕ್ಕೆ ಆಟೋ ಚಾಲಕರ ಬೆವರಿನ ಬೆಲೆ ಗೊತ್ತಿಲ್ಲ. ಅವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ನಿಮ್ಮ “ಬಂಡಲ್ ಇಂಜಿನ್” ಕೇಂದ್ರ ಸರ್ಕಾರ ಈಗ ತುಕ್ಕು ಹಿಡಿದಿದೆಯೇ? ವಾಸ್ತವದಲ್ಲಿ ಸಮಸ್ಯೆಗಳಿದ್ದರೂ ನಮ್ಮ ದೇಶದಲ್ಲಿ ಎಲ್ಲವೂ ಸರಿಯಿದೆ ಎಂದು ಸುಳ್ಳು ಹೇಳುತ್ತಿರುವುದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಕೂಡಲೇ ದೆಹಲಿಯ ನಿಮ್ಮ ಯಜಮಾನರಿಗೆ ಪತ್ರ ಬರೆದು ಬೆಂಗಳೂರಿಗೆ ಬೇಕಾದ LPG ತರಿಸಿಕೊಡುವ ಕೆಲಸ ಮಾಡಿ. ನೆನಪಿರಲಿ, ಬೆಂಗಳೂರು ನಿಮ್ಮ ಸಿನಿಮಾ ಸೆಟ್ ಅಲ್ಲ, ಇದು ಕೋಟಿ ಜನರ ಬದುಕಿನ ಕಣಜ. ನಿಮ್ಮ ಈ “ಫೋಟೋ-ಆಪ್ ರಾಜಕೀಯ”ಕ್ಕೆ ಸಾಮಾನ್ಯ ಜನ ಮತ್ತು ಆಟೋ ಚಾಲಕರು ದೊಡ್ಡ ನಮಸ್ಕಾರ ಹಾಕುವ ಕಾಲ ಹತ್ತಿರದಲ್ಲಿದೆ ಎಂಬುದನ್ನು ಮರೆಯಬೇಡಿ! ಎಂದಿದ್ದಾರೆ.


Share It

You cannot copy content of this page