ಸುದ್ದಿ

ಉಡುಪಿಯಲ್ಲಿ ಕಲುಷಿತ ನೀರು ಕುಡಿದು 500ಕ್ಕೂ ಹೆಚ್ಚುಮಂದಿ ಅಸ್ವಸ್ಥ

Share It

ಉಡುಪಿ: ಕಲುಷಿತ ನೀರು ಕುಡಿದು 500ಕ್ಕೂ ಹೆಚ್ಚುಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಮಡಿಕಲ್ ಮತ್ತು ಕರ್ಕಿಕಳಿ ಎಂಬಲ್ಲಿ ನಡೆದಿದೆ.

ಪ್ರಕರಣ ಬೆಳಕಿಗೆ ಬರದಂತೆ ತಾಲೂಕು ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಮುನ್ನೆಚ್ಚರಿಕೆ ವಹಿಸಿದ್ದಾಗ್ಯೂ ಸ್ಥಳೀಯರ ಆಕ್ರೋಶದಿಂದ ಪ್ರಕರಣ ಬಯಲಾಗಿದೆ. ಕಲುಷಿತ ನೀರು ಕುಡಿದ ಗ್ರಾಮಸ್ಥರ ಪೈಕಿ ಕರ್ಕಿಕಳಿ ಮತ್ತು ಕಾಸನಾಡಿ ಪ್ರದೆಶದ ವಾರ್ಡ್ 6 ಮತ್ತು 7ರಲ್ಲಿ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನು ನೀರನ್ನು ಕುದಿಸಿ ಕುಡಿದವರು ಮಾತ್ರ ಕಾಯಿಲೆಯಿಂದ ಬಚಾವಾಗಿದ್ದಾರೆ. ಕಲುಷಿತ ನೀರಿನಿಂದಾಗಿಯೇ ಕಾಯಿಲೆಗಳು ಶುರುವಾಗಿದೆ ಎಂದು ಆರೋಗ್ಯ ಇಲಾಖೆಯ ವರದಿ ದೃಢಪಡಿಸಿದೆ ಎಂದು ತಿಳಿದು ಬಂದಿದೆ. 6 ಮತ್ತು 7ನೇ ವಾರ್ಡ್‌ನ ಪ್ರತಿ ಮನೆಯಲ್ಲೂ 3ಕ್ಕೂ ಅಧಿಕ ಮಂದಿಗೆ ವಾಂತಿ, ಭೇದಿಯಿಂದ ಬಳಲುತ್ತಿದ್ದು, 80 ವರ್ಷದ ವಯೋವೃದ್ಧರಿಗೆ ರಕ್ತ ಭೇದಿ ಆರಂಭಗೊಂಡಿದೆ. ನೂರಾರು ಜನ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಪ್ಪುಂದ ಗ್ರಾಪಂ ವ್ಯಾಪ್ತಿಯ ಕಾಸನಾಡಿ ಎಂಬಲ್ಲಿರುವ ಬೃಹತ್ ಗಾತ್ರದ ನೀರಿನ ಟ್ಯಾಂಕಿನಿಂದ ಕಾಸನಾಡಿ ಮತ್ತು ಕರ್ಕಿಕಳಿ ಪ್ರದೇಶಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಕಳೆದ ಆರೇಳು ವರ್ಷಗಳಿಂದ ಟ್ಯಾಂಕ್ ಸ್ವಚ್ಛತೆ ಮಾಡಿಲ್ಲದೇ ಇರುವುದು ಮತ್ತು ನೀರು ಸರಬರಾಜಿನ ಪೈಪುಗಳು ಲೀಕೇಜ್ ಆಗುತ್ತಿದ್ದು, ಕೆಲವು ಕಡೆ ಒಳಚರಂಡಿ ಪೈಪ್ ಲೈನ್ ಮತ್ತು ನೀರಿನ ಪೈಪ್ ಲೈನ್ ಜೋಡಿಕೆಯಿಂದಾಗಿ ನೀರು ಕಲುಷಿತಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆಯೂ ನಡೆದಿದೆ.


Share It

You cannot copy content of this page