ಬೆಂಗಳೂರು: ಕರ್ನಾಟಕ ಬಿಜೆಪಿಯ ಸುಳ್ಳಿನ ಕಾರ್ಖಾನೆ ಮತ್ತೆ ಓವರ್‌ಟೈಮ್ ಕೆಲಸ ಮಾಡುತ್ತಿದೆ. ಬಿಹಾರ ಚುನಾವಣೆಗೆ ನಮ್ಮ ಕಾಂಗ್ರೆಸ್ ಸರ್ಕಾರ ಹಣ ನೀಡುತ್ತಿದೆ ಎಂಬ ನಿಮ್ಮ ಕಪೋಲಕಲ್ಪಿತ ಆರೋಪ ಹಾಸ್ಯಾಸ್ಪದ. ನಿಮ್ಮ ಸುಳ್ಳಿನ ಸರಮಾಲೆಗೆ ಕೊನೆಯೇ ಇಲ್ಲವೇ? ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ರಾಮಲಿಂಗಾ ರೆಡ್ಡಿ ಟೀಕಿಸಿದ್ದಾರೆ.
ಚುನಾವಣೆಗೆ ಅಕ್ರಮ ಭ್ರಷ್ಟಾಚಾರದ ಹಣವನ್ನು ಬಳಸುವುದು ನಿಮ್ಮ ಜಾಯಮಾನ, ಕಾಂಗ್ರೆಸ್‌ನದ್ದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ದೇಶಕ್ಕೆ ನೀಡಿದ ಕೊಡುಗೆ ಮತ್ತು ಜನಪರ ಕೆಲಸಗಳಿಂದ ಕಾಂಗ್ರೆಸ್ ಪಕ್ಷ ಇಂದಿಗೂ ಸದೃಢವಾಗಿದೆ.ನಿಮ್ಮದೇ ಆಡಳಿತದ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸುತ್ತೇನೆ ಎಂದಿದ್ದಾರೆ.
2008-2013 ಮತ್ತು 2019-2023: ಈ ಅವಧಿಗಳಲ್ಲಿ ಕರ್ನಾಟಕದಲ್ಲಿ ನಿಮ್ಮದೇ ಸರ್ಕಾರವಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಚುನಾವಣೆ ನಡೆದವು. ಆಗ ಕರ್ನಾಟಕದ ಸಂಪತ್ತನ್ನು ಆ ಚುನಾವಣೆಗಳಿಗೆ ನೀವೆಲ್ಲರೂ ಹಂಚಿ ಕಳುಹಿಸಿದ್ದೀರಾ? ರಾಜ್ಯದ ಜನತೆಯ ಮುಂದೆ ಉತ್ತರಿಸುವ ಧೈರ್ಯ ನಿಮಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಆಪರೇಷನ್ ಕಮಲ: ಹಣದ ಹೊಳೆ ಹರಿಸಿ, ಶಾಸಕರನ್ನು ಕುದುರೆಗಳಂತೆ ಖರೀದಿಸಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದ ‘ಆಪರೇಷನ್ ಕಮಲ’ದ ಪಿತಾಮಹರು ನೀವು ಎನ್ನುವುದು ರಾಜ್ಯದ ಮೂಲೆ ಮೂಲೆಯಲ್ಲಿರುವ ಸಾಮಾನ್ಯ ಪ್ರಜೆಗೂ ತಿಳಿದಿದೆ. ಭ್ರಷ್ಟಾಚಾರದ ಗಂಗೋತ್ರಿಯಾದ ನೀವು, ಇಂದು ಶುದ್ಧ ಹಸ್ತರೆಂದು ಬಿಂಬಿಸಿಕೊಳ್ಳಲು ಹೊರಟಿರುವುದು ಈ ಶತಮಾನದ ಅತಿದೊಡ್ಡ ಜೋಕ್! ಅಧಿಕಾರಕ್ಕಾಗಿ ನೀವು ಖರೀದಿಸಿದ ಕ್ರಿಮಿನಲ್ ಹಿನ್ನೆಲೆಯ ಶಾಸಕರನ್ನು ಕರ್ನಾಟಕ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.
40% ಸರ್ಕಾರ: ರಾಜ್ಯ ಗುತ್ತಿಗೆದಾರರ ಸಂಘವು ‘40% ಕಮಿಷನ್’ ಆರೋಪ ಮಾಡಿ ಪ್ರಧಾನಿಗೆ ಪತ್ರ ಬರೆದು ನಿಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಜಗಜ್ಜಾಹೀರು ಮಾಡಿತ್ತು. ಆ ಕಮಿಷನ್ ಹಣ ಯಾವ ಯಾವ ರಾಜ್ಯಗಳಿಗೆ ಹೋಯಿತು ಎಂದು ಜನತೆಗೆ ಈಗಲಾದರೂ ಲೆಕ್ಕ ಕೊಡುವಿರ?

ನಮ್ಮ ಸರ್ಕಾರ ‘ಗ್ಯಾರಂಟಿ’ಗಳ ಮೂಲಕ ರಾಜ್ಯದ ಬಡವರ ಖಾತೆಗೆ ನೇರವಾಗಿ ಹಣ ಜಮೆ ಮಾಡುತ್ತಿದೆ. ನಿಮ್ಮಂತೆ ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಕಪ್ಪು ಹಣವನ್ನು ಬಿಳಿ ಮಾಡುವ ಚಾಳಿ ನಮಗಿಲ್ಲ ಎಂದಿದ್ದಾರೆ.
ವಾಸ್ತವವಾಗಿ, 2019ರಿಂದ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಬರೋಬ್ಬರಿ ₹6,060 ಕೋಟಿ ಸಂಗ್ರಹಿಸಿದ್ದು, ಅದರಲ್ಲಿ ಇಡಿ-ಐಟಿ ತನಿಖೆ ಎದುರಿಸುತ್ತಿದ್ದ ಕಂಪನಿಗಳಿಂದಲೇ ₹2746 ಕೋಟಿಗೂ ಹೆಚ್ಚು ದೊಡ್ಡ ಮೊತ್ತದ ದೇಣಿಗೆ ಪಡೆದಿದ್ದೀರಿ. ಈ ಭ್ರಷ್ಟ ಹಣವನ್ನೇ ನೀವು ಬೇರೆ ರಾಜ್ಯಗಳ ಚುನಾವಣೆಗೆ ಬಳಸುತ್ತಿರುವುದು ಅಲ್ಲವೇ?. ನೀವು ನಮಗೆ ಪಾಠ ಹೇಳುವ ನೈತಿಕತೆ ಉಳಿಸಿಕೊಂಡಿಲ್ಲ. ಮೊದಲು ನಿಮ್ಮ ಆಡಳಿತದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕಿಡಿಕಾರಿದ್ದಾರೆ.