ಆರೋಗ್ಯ ಉಪಯುಕ್ತ ಸುದ್ದಿ

ರಾಜ್ಯದಲ್ಲಿ ನಿನ್ನೆ 175 ಮಂದಿಗೆ ಡೆಂಘೀ ಜ್ವರ: ಝೀಕಾ ವೈರಸ್ ಗೆ ಮೊದಲ ಸಾವು

Share It

ಬೆಂಗಳೂರು : ಕರ್ನಾಟಕದಲ್ಲಿ ಡೆಂಘೀ ಸೋಂಕಿನ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಶನಿವಾರ ಒಂದೇ ದಿನ 175 ಜನರಿಗೆ ಡೆಂಗ್ಯೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 115 ಜನರಿಗೆ ಡೆಂಗ್ಯು ದೃಢಪಟ್ಟಿದೆ. ಡೆಂಘೀ ಸೋಂಕಿತ 352 ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 127 ಸೋಂಕಿತರು ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ರಾಜ್ಯದಲ್ಲಿ ಇದುವರೆಗೆ 7 ಸಾವಿರ ಜನರಿಗೆ ಡೆಂಘೀ ಸೋಂಕು ತಗುಲಿದೆ.

ರಾಜ್ಯದಲ್ಲಿ ಡೆಂಘೀ ದಂಡಯಾತ್ರೆ ಮುಂದುವರಿದಿದೆ. 7 ಸಾವಿರಕ್ಕೂ ಅಧಿಕ ಕೇಸ್​ಗಳು ಪತ್ತೆಯಾಗಿವೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 175 ಜನರಲ್ಲಿ ಡೆಂಗ್ಯೂ ಕೇಸ್ ವರದಿಯಾಗಿದ್ದು ಪಾಲಿಕೆ ವ್ಯಾಪ್ತಿಯಲ್ಲಿ 1908 ಹೊಸ ಪ್ರಕರಣ ಧೃಡಪಟ್ಟಿದೆ. ಇನ್ನು ಡೆಂಘೀನಿಂದ ಅಂಜನಾಪುರದ 11 ವರ್ಷದ ಬಾಲಕ ಗಗನ್ ಸಾವನ್ನಪ್ಪಿದ್ದಾನೆ.

ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗಗನ್ ಚಿಕಿತ್ಸೆ ಫಲಿಸದೇ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾನೆ. ಗಗನ್ ಜಂಬೂಸವಾರಿ ದಿಣ್ಣೆಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ. ಬಾಲಕನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ದಿನ ದಿನಕ್ಕೂ ಹೆಚ್ಚಾಗ್ತಿರೋ ಡೆಂಗ್ಯು ತಡೆಗೆ ಗದಗ ಜಿಲ್ಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗ್ತಿದೆ. ಡೆಂಘೀ ಹರಡುವ ಪ್ರದೇಶಗಳಲ್ಲಿ ಲಾರ್ವಾ ಸರ್ವೇ ಮಾಡಲಾಗ್ತಿದೆ. ಲಾರ್ವಾ ನಾಶಕ್ಕೆ ನೀರಿನ ಟ್ಯಾಂಕ್ ಗಳಿಗೆ ಗಪ್ಪಿ, ಗಾಂಬೂಸಿಯಾ ಮೀನುಗಳನ್ನ ಬಿಡಲಾಗ್ತಾಯಿದೆ.

ಕೆರೆಗಳು, ಮನೆ ಮನೆಗಳಲ್ಲಿ ತೆರೆದ ನೀರಿನ ಟ್ಯಾಂಕ್​ಗಳಿಗೂ ಮೀನು ಬಿಡಲಾಗ್ತಿದೆ. ಆ ಮೂಲಕ ಡೆಂಘೀ ತಡೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಡೆಂಘೀ ರಣಕೇಕೆ ನಡುವೆ ಝೀಕಾ ವೈರಸ್​ಗೆ ಮೊದಲ ಬಲಿ!
ರಾಜ್ಯದಲ್ಲಿ ಡೆಂಘೀ ಅಬ್ಬರ ಜೋರಾಗಿರುವ ಹೊತ್ತಲೇ ಇದೀಗ ಝೀಕಾ ವೈರಸ್ ಆರ್ಭಟ ಶುರುವಾಗಿದೆ. ಶಿವಮೊಗ್ಗದ ಗಾಂಧಿನಗರದಲ್ಲಿ 74 ವರ್ಷದ ವೃದ್ಧ ಝೀಕಾ ವೈರಸ್​ಗೆ ಮೊದಲ ಬಲಿಯಾಗಿದ್ದಾರೆ. ಇನ್ನು, ಜೂನ್ 19ರಂದು ವೃದ್ಧನಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜೂನ್ 21ರಂದು ವೃದ್ಧನಲ್ಲಿ ಝೀಕಾ ವೈರಸ್ ಪತ್ತೆಯಾಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕುಟುಂಬದವರು ಜುಲೈ 4ರಂದು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದೊಯ್ದಿದ್ದರು. ಆದ್ರೆ, ಮನೆಯಲ್ಲಿದ್ದ ವೃದ್ಧ ಶುಕ್ರವಾರ ಮೃತಪಟ್ಟಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಝೀಕಾ ಆತಂಕ ಮನೆ ಮಾಡಿದೆ.


Share It

You cannot copy content of this page