180 ಕೋಟಿ ರೂ. ಸಾಲದ ಕೇಸ್: ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ಸಿಬಿಐ ಕೋರ್ಟ್

Share It

ಮುಂಬೈ : ಇಂಡಿಯನ್ ಓವರ್​ಸೀಸ್ ಬ್ಯಾಂಕ್​ನಿಂದ 180 ಕೋಟಿ ರೂ ಸಾಲ ಪಡೆದು ಮರುಪಾವತಿಸದೇ ಬಾಕಿ ಉಳಿಸಿರುವ ಪ್ರಕರಣದಲ್ಲಿ ವಿಜಯ್ ಮಲ್ಯ ವಿರುದ್ಧ ಮುಂಬೈನ ವಿಶೇಷ ಸಿಬಿಐ ಕೋರ್ಟ್​ವೊಂದು ಜಾಮೀನುರಹಿತ ವಾರಂಟ್ ಹೊರಡಿಸಿದೆ.

ಸಿಬಿಐ ಕೋರ್ಟ್ ಜಡ್ಜ್ ಎಸ್.ಪಿ. ನಾಯ್ಕ್ ನಿಂಬಾಳ್ಕರ್ ಅವರು ಇತ್ತೀಚೆಗೆ ಈ ಆದೇಶ ಹೊರಡಿಸಿರುವುದು ತಿಳಿದುಬಂದಿದೆ. 68 ವರ್ಷದ ವಿಜಯ್ ಮಲ್ಯ ವಿರುದ್ಧ ಬೇರೆ ಬೇರೆ ಪ್ರಕರಣಗಳಲ್ಲಿ ಈ ಹಿಂದೆ ಜಾಮೀನುರಹಿತ ವಾರಂಟ್​ಗಳನ್ನು ಹೊರಡಿಸಲಾಗಿದೆ. ಮುಂಬೈನ ಸಿಬಿಐ ಕೋರ್ಟ್ ಈ ಹಿನ್ನೆಲೆಯಲ್ಲಿ ಓಪನ್ ಎಂಡೆಡ್ ವಾರಂಟ್ ಹೊರಡಿಸಿದೆ. ಅಂದರೆ, ಗಡುವು ಇಲ್ಲದ ವಾರಂಟ್ ಇದಾಗಿದೆ. ಹೆಚ್ಚು ಗಂಭೀರ ಸ್ವರೂಪದ ವಾರಂಟ್ ಇದಾಗಿರುತ್ತದೆ.

ವಿಜಯ ಮಲ್ಯ ಮೇಲೆ ಬ್ಯಾಂಕ್ ವಂಚನೆ ಆರೋಪ:

ಸದ್ಯ ಲಂಡನ್​ನಲ್ಲಿರುವ ವಿಜಯ್ ಮಲ್ಯ ಕಿಂಗ್​ಫಿಶರ್ ಏರ್ಲೈನ್ಸ್ ಮಾಲೀಕರಾಗಿದ್ದಾಗ ಇಂಡಿಯನ್ ಓವರ್​ಸೀಸ್ ಬ್ಯಾಂಕ್​ನಿಂದ ಪಡೆದ ಸಾಲವನ್ನು ತೀರಿಸಲಿಲ್ಲ. ಇದರಿಂದ ಬ್ಯಾಂಕ್​ಗೆ 180 ಕೋಟಿ ರೂಗೂ ಹೆಚ್ಚು ನಷ್ಟ ಉಂಟು ಮಾಡಿದರು ಎಂದು ಮಲ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಆರೋಪಿಸಿದೆ.

ಐಒಬಿ ಬ್ಯಾಂಕ್ 2007ರಿಂದ 2012ರ ನಡುವೆ ಕಿಂಗ್​ಫಿಶರ್ ಏರ್ಲೈನ್ಸ್​ಗೆ ವಿವಿಧ ಸಂದರ್ಭಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸಾಲಗಳನ್ನು ನೀಡಿತ್ತು. ಆ ಸಾಲವನ್ನು ಕಿಂಗ್​ಫಿಶರ್ ಏರ್ಲೈನ್ಸ್​ನ ಪ್ರೊಮೋಟರ್ ಆದ ವಿಜಯ್ ಮಲ್ಯ ಬೇರೆ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದರೆಂದು ಸಿಬಿಐ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ತಿಳಿಸಲಾಗಿದೆ.

ವಿಜಯ್ ಮಲ್ಯ ಇಂಡಿಯನ್ ಓವರ್​ಸೀಸ್ ಬ್ಯಾಂಕ್​ಗೆ ಮಾತ್ರವಲ್ಲ ಎಸ್​​ಬಿಐ ಹಾಗೂ ಇತರ ಹಲವು ಬ್ಯಾಂಕ್​ಗಳಿಂದಲೂ ಸಾಲ ಪಡೆದು ಮರುಪಾವತಿಸದೇ ವಂಚಿಸಿರುವ ಆರೋಪ ಇದೆ.

ಸಾಲದ ಪ್ರಕರಣಗಳ ಸುಳಿ ಬಿಗಿಗೊಳ್ಳುತ್ತಿರುವಂತೆಯೇ ವಿಜಯ್ ಮಲ್ಯ 2016ರ ಮಾರ್ಚ್ ತಿಂಗಳಲ್ಲಿ ಭಾರತ ತೊರೆದು ಹೋದರು. 2019ರ ಜನವರಿ ತಿಂಗಳಲ್ಲಿ ಮನಿ ಲಾಂಡರಿಂಗ್ ಕಾಯ್ದೆ ಅಡಿಯಲ್ಲಿ ವಿಜಯ್ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಸ್ಪೆಷಲ್ ಕೋರ್ಟ್ ಘೋಷಿಸಿದೆ.

ಕಳೆದ ವಾರ ನಡೆದ ವಿಚಾರಣೆ ಬಳಿಕ ಸಿಬೈ ಕೋರ್ಟ್ ವಿಜಯ್ ಮಲ್ಯ ಹಾಗೂ ಐವರು ಇತರ ಆರೋಪಿಗಳಿಗೆ ಸಮನ್ಸ್ ಹೊರಡಿಸಿತು. ಮಲ್ಯ ದೇಶಭ್ರಷ್ಟ ಅಪರಾಧಿಯಾದ ಹಿನ್ನೆಲೆಯಲ್ಲಿ ಜಾಮೀನುರಹಿತ ವಾರಂಟ್ ಹೊರಡಿಸುವಂತೆ ಸಿಬಿಐ ಮಾಡಿಕೊಂಡ ಮನವಿಗೆ ಕೋರ್ಟ್ ಪುರಸ್ಕರಿಸಿದೆ.


Share It

You May Have Missed

You cannot copy content of this page