ಬೆಂಗಳೂರು: 38 ತಿಂಗಳ ಹಿಂಬಾಕಿ ವೇತನ ಹಾಗೂ 2024ರಿಂದಲೇ ವೇತನ ಪರಿಷ್ಕರಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರ ವಿರುದ್ಧ ಸಾರಿಗೆ ನೌಕರರ ಸಂಘಟನೆ ಕರೆ ನೀಡಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ.
ಸರಕಾರ ಹಿಂಬಾಕಿ ಪಾವತಿಗೆ ಒಪ್ಪಿಗೆ ಸೂಚಿಸಿ, 1,271 ಕೋಟಿ ರು. ಬಿಡುಗಡೆ ಮಾಡಲು ಸೂಚಿಸಿದೆ. ಜತೆಗೆ ವೇತನ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳ ಜತೆಗೆ ಚರ್ಚೆ ನಡೆಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟಿದ್ದು, ಇನ್ನುಳಿದ ಬೇಡಿಕೆಗಳ ಈಡೇರಿಕೆಗೆ ಕಾಲಾವಕಾಶ ನೀಡಿ ಮುಷ್ಕರ ನಿಲ್ಲಿಸಿವೆ.
ಮುಷ್ಕರದ ಭೀತಿಯಲ್ಲಿದ್ದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. ಮಾರ್ಚ್ 2ರೊಳಗೆ ಸಭೆ ಕರೆದು ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ಮುಂದುವರೆಸಲಾಗುವುದು ಎಂದು ನೌಕರರ ಜಂಟಿ ಕ್ರಿಯಾ ಸಮಿತಿ ಎಚ್ಚರಿಸಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಂಟಿ ಕ್ರಿಯಾ ಸಮಿತಿಯು ಬೆಂಗಳೂರು ಚಲೋ ಕರೆ ನೀಡಿತ್ತು. ಗುರುವಾರ ಸಂಜೆಯೊಳಗೆ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬಸ್ ಸಂಚಾರ ನಿಲ್ಲಿಸಿ ಮುಷ್ಕರ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಈ ಬೆನ್ನಲೇ 26 ತಿಂಗಳ ಹಿಂಬಾಕಿ ವೇತನ ಹಾಗೂ ವೇತನ ಪರಿಷ್ಕರಿಸಲು ಸರ್ಕಾರ ಒಪ್ಪಿಕೊಂಡಿತ್ತು. ಇದಕ್ಕೆ ತೃಪ್ತರಾಗದ ನೌಕರರ ನಗರದ ಫ್ರೀಡಂಪಾರ್ಕ್ನಲ್ಲಿ ಧರಣಿ ಕೈಗೊಂಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ, ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮುಕ್ತವಾಗಿದೆ. ಸಾರಿಗೆ ನಿಗಮಗಳ ಸಾಧಕ-ಭಾದಕಗಳ ನಡುವೆಯೂ 26 ತಿಂಗಳ ಹಿಂಬಾಕಿ ವೇತನ ನೀಡಲು ಸರ್ಕಾರ ಒಪ್ಪಿಕೊಂಡಿದೆ. ವೇತನ ಪರಿಷ್ಕರಣೆ ಸಂಬಂಧಿಸಿದಂತೆ ನಾಲ್ಕು ನಿಗಮಗಳ ಎಂ.ಡಿಗಳ ಜೊತೆಗೆ ಸಾರಿಗೆ ಸಚಿವರೊಂದಿಗೆ ಶೀಘ್ರದಲ್ಲಿ ಸಭೆ ಕರೆಯಲಾಗುವುದು. ಹೀಗಾಗಿ, ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು.

